| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯ ಆಕರ್ಷಿಸುವ ಹೂಡಿಕೆಯನ್ನು ಬೆಂಗಳೂರಿನಿಂದ ಆಚೆಗೆ ತೆಗೆದುಕೊಂಡು ಹೋಗಲು ಎಮರ್ಜಿಂಗ್ ಕ್ಲಸ್ಟರ್ಗಳನ್ನು ರೂಪಿಸಲು ಪ್ರಯತ್ನ ನಡೆಸಿರುವ ಸರ್ಕಾರ, ಅದಕ್ಕೆ ಪೂರಕವಾಗಿ ಕೌಶಲಯುತ ಯುವ ಸಮುದಾಯವನ್ನು ಸಿದ್ಧಪಡಿಸಲು ಯುವನಿಧಿಯ ಜತೆಜತೆಗೆ ಹೊಸ ಕಾರ್ಯಕ್ರಮ ರೂಪಿಸಲು ಮುಂದಾಗಿದೆ. ಆ ಮೂಲಕ ರಾಜ್ಯದಲ್ಲಿ ತಾಂತ್ರಿಕ ಸುವಾಸನೆ (ಟೆಕ್ ಫ್ಲೇವರ್) ಹರಡಿಸುವ ಉದ್ದೇಶವನ್ನು ಹೊಂದಿದೆ.
ಬೆಂಗಳೂರಿನಿಂದ ಆಚೆಗೆ ಅಂದರೆ ಎರಡು ಮತ್ತು ಮೂರನೇ ಹಂತದ ನಗರಗಳೆಂದು ಹೇಳುತ್ತಿದ್ದಂತೆ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ. ಆದ್ದರಿಂದ ಕಳೆದ ಹಲವು ವರ್ಷಗಳಿಂದ ನಡೆಸಿರುವ ಪ್ರಯತ್ನ ಸಫಲವಾಗುತ್ತಿಲ್ಲ. ಎರಡು ಮತ್ತು ಮೂರನೇ ಹಂತದ ನಗರಗಳನ್ನು ಎಮರ್ಜಿಂಗ್ ಕ್ಲಸ್ಟರ್ಗಳೆಂದು (ಹೊರಹೊಮ್ಮುತ್ತಿರುವ ನಗರ) ಮರು ನಾಮಕರಣದೊಂದಿಗೆ ಆಹ್ವಾನಿಸಲು ನಿರ್ಧರಿಸಿದೆ. ಆ ಮೂಲಕ ಹೂಡಿಕೆದಾರರ ವಿಶ್ವಾಸವೃದ್ಧಿಸಲು ಸಾಧ್ಯವೆಂದು ಸರ್ಕಾರ ಕಾರ್ಯೋನ್ಮುಖವಾಗಿದೆ.
ಕಳೆದ ಐದು ವರ್ಷಗಳಲ್ಲಿ 7.60 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ರಾಜ್ಯ ಆಕರ್ಷಿಸಿದೆ. ಅಷ್ಟು ಮೊತ್ತ ರಾಜ್ಯದಲ್ಲಿ ವಿನಿಯೋಗವಾಗಬೇಕೆಂದರೆ ಈ ಹಂತದಲ್ಲಿ ಸರ್ಕಾರದ ಕರ್ತವ್ಯ ಬಹುದೊಡ್ಡದಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳು ಆಯಾ ಕ್ಷೇತ್ರದಲ್ಲಿ ಆಕರ್ಷಿಸಿರುವ ಹೂಡಿಕೆ ಇದು. ಇನ್ನೂ ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ತರುವುದು ಸರ್ಕಾರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಎಮರ್ಜಿಂಗ್ ಕ್ಲಸ್ಟರ್ಗಳನ್ನು ಸಿದ್ಧಪಡಿಸುವುದು ಹಾಗೂ ಮೂಲಸೌಕರ್ಯ ಒದಗಿಸುವ ಕಡೆ ಸರ್ಕಾರ ಹೆಜ್ಜೆಯನ್ನಿಟ್ಟಿದೆ.
ಮೊದಲ ಸ್ಥಾನದ ಗುರಿ: ಮುಂದಿನ ಐದು ವರ್ಷಗಳಿಗೆ ಏನು ಬೇಕು ಎಂಬುದನ್ನು ಗುರಿಯಾಗಿಟ್ಟುಕೊಂಡು ಐಟಿ ಮತ್ತು ಬಿಟಿ ಇಲಾಖೆ ಕಾರ್ಯತಂತ್ರ ರೂಪಿಸುತ್ತಿದೆ. ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿ ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ತರುವ ಉದ್ದೇಶವನ್ನು ಹೊಂದಿದೆ.
ಕ್ಲಸ್ಟರ್ಗಳ ರಚನೆ: ಹೂಡಿಕೆದಾರರನ್ನು ಎಮರ್ಜಿಂಗ್ ಕ್ಲಸ್ಟರ್ ನಗರಗಳಿಗೆ ಆಹ್ವಾನಿಸುವ ಭಾಗವಾಗಿ ಯಾವ ನಗರದಲ್ಲಿ ಯಾವ ಕ್ಲಸ್ಟರ್ಗಳನ್ನು ರೂಪಿಸಬೇಕೆಂದು ಸಿದ್ಧತೆ ಮಾಡಲಾಗಿದೆ. ಮೈಸೂರು, ಕಲಬುರಗಿ, ಮಂಗಳೂರು, ಬೆಳಗಾವಿ, ರಾಯಚೂರು, ದಾವಣಗೆರೆ, ಬಳ್ಳಾರಿ, ವಿಜಯಪುರ, ಬೀದರ್, ಚಿತ್ರದುರ್ಗ, ಕೋಲಾರ ಹೀಗೆ ವಿವಿಧ ನಗರಗಳನ್ನು ಎಮರ್ಜಿಂಗ್ ಕ್ಲಸ್ಟರ್ಗಳಾಗಿ ರೂಪಿಸುವ ಉದ್ದೇಶವಿದೆ. ಆರು ಕ್ಲಸ್ಟರ್ಗಳನ್ನು ತಕ್ಷಣ ರೂಪಿಸಿ ಅದರಲ್ಲಿ ಮೂರನ್ನು ಶೀಘ್ರದಲ್ಲಿ ಆರಂಭಿಸುವುದು ಸರ್ಕಾರದ ಕಾರ್ಯತಂತ್ರವಾಗಿದೆ. ಮೈಸೂರಿನಲ್ಲಿ ಸೆಮಿ ಕಂಡಕ್ಟರ್ ಹಾಗೂ ಸೈಬರ್ ಸೆಕ್ಯೂರಿಟಿ ಕ್ಲಸ್ಟರ್, ಮಂಗಳೂರಿನಲ್ಲಿ ಫಿನ್ ಟೆಕ್ ಹಾಗೂ ಧಾರವಾಡದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಲಾಜಿಸ್ಟಿಕ್ ಕ್ಲಸ್ಟರ್ ಆರಂಭಿಸಲಾಗುತ್ತದೆ. ಇದರ ಜತೆಗೆ, ಬೆಳಗಾವಿಯಲ್ಲಿ ಏರೋಸ್ಪೇಸ್ ಮತ್ತು ಮ್ಯಾನ್ಯುಫ್ಯಾಕ್ಚರ್, ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ಗಳನ್ನು ಆರಂಭಿಸಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದೆ.
ಕೌಶಲ ಮಂಡಳಿ: ಕಾಂಗ್ರೆಸ್ ಚುನಾವಣೆಗೆ ಮುನ್ನ ಕೊಟ್ಟಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಜಾರಿಯಾಗಿವೆ. ಐದನೇ ಗ್ಯಾರಂಟಿ ಮುಂದಿನ ಜನವರಿಯಿಂದ ಜಾರಿಗೆ ಬರಲಿದೆ. ವಿದ್ಯಾರ್ಥಿಗಳಿಗೆ ಕೇವಲ ಹಣ ಕೊಟ್ಟು ಸುಮ್ಮನಾಗದೇ ಅವರನ್ನು ಇಂದಿನ ಉದ್ಯಮಕ್ಕೆ ತಕ್ಕಂತೆ ಕೌಶಲ ತರಬೇತಿ ನೀಡಲು ಕೌಶಲ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಕೌಶಲ ಸಲಹಾ ಮಂಡಳಿ ರಚಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು, ತರಬೇತಿ ಸಂಸ್ಥೆಗಳು, ತಜ್ಞರನ್ನು ಒಳಗೊಂಡ 29 ಜನ ಮಂಡಳಿಯಲ್ಲಿದ್ದಾರೆ.
ಉದ್ಯೋಗವನ್ನು ಸೃಷ್ಟಿಸುವ ರೀತಿಯಲ್ಲಿ ತರಬೇತಿ ಮಂಡಳಿ ಕೆಲಸ ಮಾಡಲಿದೆ. ಉದ್ದಿಮೆಗಳನ್ನು ಸಂರ್ಪಸಿ ತರಬೇತಿಗೆ ಅವರಿಂದ ಶೇ.50 ರಷ್ಟು, ಸರ್ಕಾರದಿಂದ ಶೇ.25 ಹಾಗೂ ತರಬೇತಿ ಆಕಾಂಕ್ಷಿಗಳಿಂದ ಶೇ.25 ರಷ್ಟು ವೆಚ್ಚ ಭರಿಸಿ ತರಬೇತಿ ಕೊಡಿಸಲಾಗುತ್ತದೆ. ಈ ತರಬೇತಿಯ ಫಲಿತಾಂಶ ಮುಂದಿನ 3-4 ವರ್ಷದಲ್ಲಿ ಸಿಗುವಂತಾಗಬೇಕು ಎಂಬುದು ಆಶಯವಾಗಿದೆ. ಅಂತಹ ಪರಿಸರವನ್ನು ಸೃಷ್ಟಿಸಲಾಗುತ್ತದೆ ಎಂದು ಐಟಿ ಮತ್ತು ಬಿಟಿ ಇಲಾಖೆ ಮೂಲಗಳು ಹೇಳುತ್ತವೆ. ಮುಂದಿನ ಮೂರು ತಿಂಗಳಿನಲ್ಲಿ ತರಬೇತಿ ಆರಂಭವಾಗುವ ರೀತಿಯಲ್ಲಿ ಫ್ರೇಮ್ರ್ಕ್ ಸಿದ್ಧಪಡಿಸಲಾಗುತ್ತಿದೆ.
ಟೆಕ್ ಸಮಿಟ್ಗೆ ಪೂರಕ: ಸದ್ಯದಲ್ಲಿಯೇ ಬೆಂಗಳೂರು ಟೆಕ್ ಸಮಿಟ್ ನಡೆಯಲಿದ್ದು, ಅಲ್ಲಿ ಬರುವ ಹೂಡಿಕೆದಾರರನ್ನು ಎಮರ್ಜಿಂಗ್ ಕ್ಲಸ್ಟರ್ಗಳ ಕಡೆಗೆ ಸೆಳೆಯುವ ಕೆಲಸ ಮಾಡಲಾಗುತ್ತದೆ. ಸರ್ಕಾರ ನೀಡಲಿರುವ ವಿನಾಯ್ತಿ ಮತ್ತು ರಿಯಾಯ್ತಿಗಳನ್ನು ತಿಳಿಸಲಾಗುತ್ತದೆ. ಕೌಶಲಯುತ ಯುವಪಡೆಯ ಬಗ್ಗೆ, ಮೂಲಸೌಕರ್ಯ ಹಾಗೂ ಸಂಪರ್ಕದ ಬಗ್ಗೆ ಮಾಹಿತಿ ನೀಡಲಾಗುತ್ತದೆ
ಮೇಳಗಳು: ಕೇವಲ ತರಬೇತಿ, ಕ್ಲಸ್ಟರ್ಗಳ ಸ್ಥಾಪನೆಗೆ ಈ ಬಾರಿ ಸರ್ಕಾರ ಸೀಮಿತವಾಗುತ್ತಿಲ್ಲ. ಉದ್ಯೋಗ ಮೇಳಗಳನ್ನು ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತದೆ. ಇದು ಉದ್ಯೋಗಾವಕಾಶಗಳ ಜತೆಗೆ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಉದ್ಯಮಗಳು ತೆರಳಲು ಸಹಕಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ.
ಉದ್ಯಮಗಳು ಬೆಂಗಳೂರು ಕೇಂದ್ರಿಕೃತ ವಾಗದೇ ರಾಜ್ಯದ ವಿವಿಧೆಡೆ ಹರಡಬೇಕಿದೆ ಆ ನಿಟ್ಟಿನಲ್ಲಿ ವಿವಿಧ ಕ್ಲಸ್ಟರ್ ಸ್ಥಾಪಿಸಲಾಗುತ್ತಿದೆ. ಹೂಡಿಕೆ ಬಂದರೆ ಉದ್ಯೋಗ ಸೃಷ್ಟಿ, ಆ ಮೂಲಕ ಜೀವನಮಟ್ಟ ಸುಧಾರಿಸಲಿದೆ. ಶೀಘ್ರ ಕ್ಲಸ್ಟರ್ಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. | ಪ್ರಿಯಾಂಕ್ ಖರ್ಗೆ ಐಟಿ- ಬಿಟಿ ಸಚಿವ
ತಾಂತ್ರಿಕ ಕೇಂದ್ರ: ಮೈಸೂರಿನಲ್ಲಿ 3 ಲಕ್ಷ ಚದರಡಿ ಜಾಗದಲ್ಲಿ ಜಾಗತಿಕ ತಾಂತ್ರಿಕ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಅಲ್ಲಿ ಮಾಹಿತಿ, ಜೈವಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಜಾಗ ನೀಡಲಾಗುತ್ತದೆ. ಎಲ್ಲ ಮೂಲಸೌಕರ್ಯವೂ ಇರುತ್ತದೆ ಎಂದು ಇಲಾಖೆಯ ಮೂಲಗಳು ಹೇಳುತ್ತವೆ. ಸ್ಟಾರ್ಟಪ್ಗಳಿಗೆ 25 ಕೋಟಿ ಮೂಲಧನ (ಸೀಡ್ ಮನಿ) ನೀಡಲಾಗುತ್ತದೆ. ಇದರಲ್ಲಿ ಶೇ.30 ರಾಜ್ಯ ಸರ್ಕಾರ, ಶೇ.30 ಮೊತ್ತವನ್ನು ಹಣಕಾಸು ಸಂಸ್ಥೆಗಳಿಂದ ನೀಡಲಾಗುತ್ತದೆ.
ಕೆಲ ಕಂಪನಿಗಳ ಜತೆ ಚರ್ಚೆ: ಅಮೆರಿಕ ಹಾಗೂ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡಿರುವ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ರಾಜ್ಯದ ವಿವಿಧ ಎರ್ಮಜಿಂಗ್ ಕ್ಲಸ್ಟರ್ಗಳಲ್ಲಿ ಇರುವ ಅವಕಾಶಗಳ ಬಗ್ಗೆ ವಿವರಿಸಿದ್ದಾರೆ. ಅಂದಾಜು 35 ಕಂಪನಿಗಳು ಆಸಕ್ತಿ ಸಹ ತೋರಿಸಿವೆ ಎಂದು ಮೂಲಗಳು ಹೇಳುತ್ತವೆ.
ಕಲಬುರಗಿಯಲ್ಲಿದೆ ಜಾಗ: ಕಲಬುರಗಿಯಲ್ಲಿ ರಾಷ್ಟ್ರೀಯ ಹೂಡಿಕೆ ವಲಯ ಸ್ಥಾಪನೆಗಾಗಿ ಗುರು ತಿಸಿದ್ದ ಸಾವಿರಾರು ಎಕರೆ ಜಾಗ ಬಳಕೆಯಾಗಿಲ್ಲ. ಅದನ್ನು ಸಿಮೆಂಟ್ ಕ್ಲಸ್ಟರ್ ಆಗಿ ರೂಪಿಸುವ ಗುರಿಯೂ ಸರ್ಕಾರದ ಮುಂದಿದೆ.
ಹೂಡಿಕೆದಾರರು ಏಕೆ ಒಪ್ಪುತ್ತಿಲ್ಲ?: ರಾಜ್ಯಕ್ಕೆ ಬರುವ ಹೂಡಿಕೆದಾರರಿಗೆ ಬೆಂಗಳೂರು ಬೇಕು, ಬೆಂಗಳೂರು ಬಿಟ್ಟು ಹೊರ ಹೋಗಲು ಮೂಲಸೌಲಭ್ಯ ಹಾಗೂ ಕೌಶಲಯುತ ಯುವ ಸಮುದಾಯದ ಕೊರತೆ ಬಗ್ಗೆ ಹೇಳುತ್ತಾರೆ. ಆದ್ದರಿಂದಲೇ ಸರ್ಕಾರ ಈ ನಿಟ್ಟಿನಲ್ಲಿ ಈಗ ಎಚ್ಚೆತ್ತಿದೆ.