ನ್ಯೂಸ್

ಪ್ರಶ್ನೆ ಕೇಳುವವರು ಆರು ವಿಧದ ಜನ, ನೀವು ಯಾವ ರೀತಿ?

ಜೀವನವು ಅಲ್ಪವಾದ ವಿಷಯವಲ್ಲ, ಈ ಭೂಮಿಯಲ್ಲಿ ಕಳೆಯುವ ಕೆಲವೇ ವರ್ಷಗಳು ಮಾತ್ರ ಜೀವನವಲ್ಲ. ಜೀವನವು ಕಾಲ ಮತ್ತು ಆಕಾಶಕ್ಕೆ ಅತೀತವಾಗಿದೆ. ನಮ್ಮ ಜೀವನಗಳಲ್ಲಿ ಆಧ್ಯಾತ್ಮಿಕ ವಲಯವನ್ನು ಹೇಗೆ ಬೆಳೆಸಿಕೊಳ್ಳುವುದು? ನಿಮ್ಮನ್ನು ಈ ಪ್ರಶ್ನೆ ಕೇಳಿಕೊಳ್ಳುವುದರಿಂದ ಪ್ರಾರಂಭಿಸಿ: ನನ್ನ ಜೀವನದಲ್ಲಿ ನನಗೇನು ಬೇಕು?.

ಆರು ರೀತಿಯ ಜನರು ಪ್ರಶ್ನೆಗಳನ್ನು ಕೇಳುತ್ತಾರೆ:- ಮೊದಲನೆ ಯವರು ದುಃಖಿಗಳು ಅಥವಾ ಅಸಂತುಷ್ಟರು. ಅವರು ಪ್ರಶ್ನೆಗಳನ್ನು ಕೇಳುತ್ತಾರೆ, ಆದರೆ ಉತ್ತರಗಳನ್ನು ಕೇಳಿಸಿಕೊಳ್ಳುವುದಿಲ್ಲ. ಅವರಿಗೆ ನೀವು ಉತ್ತರ ನೀಡಿದರೆ ನೀವು ಮೂರ್ಖರಷ್ಟೆ. ಸುಮ್ಮನೆ ಇರಬೇಕಷ್ಟೆ. ಅವರನ್ನು ಕಂಡು ಸುಮ್ಮನೆ ಮುಗುಳ್ನಗಿ. ನಿಮ್ಮ ಇರುವಿಕೆ ಮಾತ್ರವೆ ಅವರಿಗೆ ಸಾಕು.

ಮನೆಯಲ್ಲಿ ಮರಣವಾದಾಗ ಪ್ರಶ್ನೆಗಳನ್ನು ಕೇಳುತ್ತಾರೆ. ‘ಹೀಗೇಕಾಯಿತು?’ ಎಂದು. ಹೇಳಲು ಏನಾದರೂ ಇರುತ್ತದೆಯೆ? ಇಲ್ಲ, ಹೇಳಲು ಏನೂ ಇರುವುದಿಲ್ಲ! ನಿಮ್ಮ ಇರುವಿಕೆ ಮಾತ್ರವೆ ಸಾಕು. ಅವರ ಪ್ರಶ್ನೆಗಳಿಗೆ ಉತ್ತರಿಸುವ ಯತ್ನವನ್ನು ಮಾಡಬೇಡಿ. ಭಗವಂತನ ವಕೀಲನೂ ಆಗಬೇಡಿ ಅಥವಾ ಅವರನ್ನು ಭಗವಂತನ ವಿರುದ್ಧವೂ ತಿರುಗಿಸಬೇಡಿ. ಸಾಮಾನ್ಯವಾಗಿ ಜನರು, ‘ಭಗವಂತನು ನಿನ್ನ ವಿಷಯದಲ್ಲಿ ನಿರ್ದಯಿಯಾಗಿದ್ದಾನೆ. ಪ್ರಕೃತಿ ನಿನ್ನ ವಿಷಯದಲ್ಲಿ ಅಷ್ಟು ನಿರ್ದಯಿಯಾಗಿದೆ. ನಿನಗೆ ಹೀಗಾಗಲೇಬಾರದಿತ್ತು’ ಎನ್ನುತ್ತಾರೆ. ಈ ರೀತಿಯ ವಿಷಯಗಳನ್ನೆಲ್ಲಾ ಹೇಳಬೇಡಿ. ಅದರಿಂದ ಅವರಿಗೆ ಯಾವ ಸಹಾಯವೂ ಆಗುವುದಿಲ್ಲ. ಆದ್ದರಿಂದ ದುಃಖಿಗಳಾದವರು ಮತ್ತು ಅಸಂತುಷ್ಟರು ಪ್ರಶ್ನೆಗಳನ್ನು ಕೇಳಿದಾಗ ಸುಮ್ಮನಿರಬೇಕು.

ಎರಡನೆಯ ರೀತಿಯವರು ಕುಪಿತರಾದವರು ಮತ್ತು ಅವರಿಗೆ ಅನ್ಯಾಯವಾಗಿದೆಯೆಂದು ಭಾವಿಸುವವರು. ಅವರಿಗೆ ಬಹಳ ಕೋಪ. ಅವರು ಯಾವ ರೀತಿಯ ಉತ್ತರವನ್ನು ಕೇಳಲೂ ಸಿದ್ಧರಾಗಿರುವುದಿಲ್ಲ. ಕೋಪ ಬಂದಾಗ ಮನಸ್ಸು ಮುಚ್ಚಿ ಹೋಗಿರುತ್ತದೆ. ಬುದ್ಧಿಯು ಕೆಲಸ ಮಾಡುವುದಿಲ್ಲ. ಭಾವನೆಗಳೇ ಮೇಲುಗೈ ಸಾಧಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅವರ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಬದಲಿಗೆ ಅವರು ಪ್ರಶಾಂತರಾಗಲು ಕಾಯುವುದೇ ಲೇಸು. ಕುಪಿತರಾದವರ ಪ್ರಶ್ನೆಗಳು ಉತ್ತರ ನೀಡುವುದಕ್ಕೆ ಯೋಗ್ಯವಾದವುಗಳಲ್ಲ.

ಮೂರನೆಯ ರೀತಿಯವರು ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳುವುದಕ್ಕೆ ಮಾತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ಉತ್ತರವನ್ನು ತಿಳಿದುಕೊಳ್ಳುವ ಆಸಕ್ತಿಯಿರುವುದಿಲ್ಲ. ‘ನಾನಿಲ್ಲಿದ್ದೇನೆ. ನೀನು ನನ್ನನ್ನು ಗುರುತಿಸುತ್ತೀಯೆ?’ ಎಂದಷ್ಟೆ ಅವರು ತೋರಿಸಿಕೊಳ್ಳಲು ಬಯಸುವುದು. ಉತ್ತರದಲ್ಲಿ ಅವರಿಗೆ ಆಸಕ್ತಿಯೇ ಇರುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಬೇರೆಲ್ಲೊ ನೋಡುತ್ತಿರುತ್ತಾರೆ. ಅವರೂ ಅಲ್ಲಿದ್ದಾರೆ ಎಂದು ತೋರಿಸಿಕೊಳ್ಳುವ ಸಲುವಾಗಿಯೆ ಪ್ರಶ್ನೆಗಳನ್ನು ಕೇಳುತ್ತಾರೆ.

ನೀವು ಶಾಲಾಶಿಕ್ಷಕರಾಗಿದ್ದರೆ ನಿಮಗೆ ಈ ಅನುಭವ ಆಗಿರುತ್ತದೆ. ಓರ್ವ ಕಾಲೇಜಿನ ಶಿಕ್ಷಕರು ತಮ್ಮ ಅನುಭವವನ್ನು ಬರೆದಿದ್ದಾರೆ. ತಾವು ಬುದ್ಧಿವಂತರು, ತಾವು ಕಕ್ಷೆಯಲ್ಲಿದ್ದೇವೆ ಎಂದು ತೋರಿಸಿಕೊಳ್ಳುವ ಸಲುವಾಗಿಯೆ ಕೆಲವೊಮ್ಮೆ ವಿದ್ಯಾರ್ಥಿಗಳು ಎದ್ದು ನಿಲ್ಲುತ್ತಾರೆ ಎನ್ನುತ್ತಾರವರು. ನಾಲ್ಕನೆಯ ರೀತಿಯ ಜನರು, ತಮಗೆ ಉತ್ತರವಂತೂ ತಿಳಿದಿದೆ, ಬೇರೆಯವರಿಗೂ ತಿಳಿದಿದೆಯೊ ಇಲ್ಲವೊ ನೋಡಿಬಿಡೋಣ ಎಂಬ ವರ್ಗಕ್ಕೆ ಸೇರಿದವರು. ಅದೇ ರೀತಿಯಲ್ಲೆ ವರ್ತಿಸುತ್ತಾರೆ. ಇಂತಹ ಜನರೊಡನೆ ಮಾತನಾಡುವುದು ವ್ಯರ್ಥ.

ಐದನೆಯ ರೀತಿಯವರಿಗೆ ಆಳವಾದ ಅನುಭವವಿದೆ ಮತ್ತು ಇನ್ನೂ ತಿಳಿದುಕೊಳ್ಳಬೇಕೆನ್ನುತ್ತಾರೆ. ನಾನು ಧ್ಯಾನ ಮಾಡಿದೆ ಮತ್ತು ಎಲ್ಲಾ ಸಂವೇದನೆಗಳೂ ಮೇಲೆದ್ದು ಬರುತ್ತಿರುವುದನ್ನು ಅನುಭವಿಸಿದೆ. ಅದೇಕೆ ಹಾಗೆ? ಅದರ ಬಗ್ಗೆ ಮತ್ತಷ್ಟು ತಿಳಿಯಬೇಕು! ಧ್ಯಾನ ಮಾಡುತ್ತಿದ್ದಾಗ ಬೆಳಕನ್ನು ಕಂಡೆ, ಘಮ್ಮನೆಯ ಸುವಾಸನೆಯಿತ್ತು. ಈ ಪ್ರಕ್ರಿಯೆಯನ್ನು ನಾನು ಸರಿಯಾಗಿ ಮಾಡುತ್ತಿರುವೆನೆ ಇಲ್ಲವೆ ಎಂದು ತಿಳಿಯಲು ಬಯಸುತ್ತೇನೆ. ಈ ಅನುಭವದ ಅರ್ಥವೇನು? ಎನ್ನುತ್ತಾರೆ. ಒಂದು ಅನುಭವದ ನಂತರ ಪ್ರಶ್ನೆಗಳನ್ನು ಕೇಳುತ್ತಾರೆ, ಏಕೆಂದರೆ ತಿಳಿವಳಿಕೆ ಮತ್ತು ಅನುಭವ ಜತೆ ಜತೆಯಾಗಿಯೆ ಹೋಗುತ್ತದೆ. ಮೊದಲನೆಯ ಸಲ ಅನುಭವವಾದಾಗ, ಆ ಅನುಭವವನ್ನು ಚೆನ್ನಾಗಿ ತಿಳಿಯಲು ಅಂಥವರು ಬಯಸುತ್ತಾರೆ.

ಆರನೆಯ ರೀತಿಯವರನ್ನು ಜಿಜ್ಞಾಸು ಎಂದು ಕರೆಯುತ್ತಾರೆ. ಅವರ ಮನಸ್ಸಿನಲ್ಲಿ ತಿಳಿಯುವ, ಆಳವಾದ ಉರಿಯುವ ಬಯಕೆಯಿರುತ್ತದೆ, ಸತ್ಯವನ್ನು, ವಾಸ್ತವವನ್ನು ತಿಳಿಯುವ ಬಯಕೆ. ಯಾರಿಗೆ ಪ್ರಶ್ನೆಯನ್ನು ಹಾಕುತ್ತಿದ್ದಾರೊ, ಅವರ ಮೇಲೆ ಪೂರ್ಣವಾದ ನಂಬಿಕೆಯಿದೆ, ಅವರಿಗೆ ಉತ್ತರ ತಿಳಿದಿದೆಯೆಂಬ ಪೂರ್ಣ ವಿಶ್ವಾಸವಿದೆ.

ಭಾರತದ ಎಲ್ಲಾ ಗ್ರಂಥಗಳು, ಶಾಸ್ತ್ರಗಳು ಪ್ರಶ್ನೆಯಿಂದ ಆರಂಭವಾಗುತ್ತವೆ. ಯಾವ ರೀತಿಯ ಪ್ರಶ್ನೆ? ಮೊದಲನೆಯ, ಎರಡನೆಯ, ಮೂರನೆಯ, ನಾಲ್ಕನೆಯ, ಐದನೆಯ ರೀತಿಯ ಪ್ರಶ್ನೆಯಲ್ಲ. ಆರನೆಯ ರೀತಿಯ ಪ್ರಶ್ನೆ. ನನಗೆ ಗೊತ್ತಿಲ್ಲ. ನಾನು ತಿಳಿದುಕೊಳ್ಳಬೇಕು. ಇವರಿಗೆ ತಿಳಿದಿದೆ. ಆದ್ದರಿಂದ ಇವರಿಗೆ ಪ್ರಶ್ನೆಯನ್ನು ಕೇಳುತ್ತೇನೆ. ಶಾಸ್ತ್ರಗಳ ಎಲ್ಲಾ ಜ್ಞಾನವೂ ಪ್ರಾಮಾಣಿಕವಾದ ಸತ್ಯ ಶೋಧಕ ಪ್ರವೃತ್ತಿಯಿಂದ, ಪ್ರಶ್ನೆಗಳಿಂದ ಆರಂಭವಾಗುತ್ತದೆ. ನೀವು ಯಾವ ರೀತಿಯ ಪ್ರಶ್ನೆಯನ್ನು ಕೇಳುವವರು?