ನ್ಯೂಸ್

ಪ್ರೇಮ ವಿವಾಹಕ್ಕೆ ಒಪ್ಪಿಲ್ಲವೆಂದು ಪ್ರಾಣ ಬಿಟ್ಟಿದ್ದ ಜೋಡಿ; ಪಶ್ಚಾತ್ತಾಪದಲ್ಲಿ ಪ್ರತಿಮೆಗೆ ಮದುವೆ ಮಾಡಿ ಮಕ್ಕಳ ಆಸೆ ನೆರವೇರಿಸಿದ ಪಾಲಕರು!

ಗುಜರಾತ್: ಪಾಲಕರು ಪ್ರೇಮಿ ವಿವಾಹಕ್ಕೆ ವಿರೋಧಿಸಿದ್ದರೆಂಬ ಹತಾಷೆಯಲ್ಲಿ ಗಣೇಶ್ ಮತ್ತು ರಂಜನಾ ಎಂಬ ಜೋಡಿ ನೇಣಿಗೆ ಶರಣಾಗಿದ್ದರು. ಇದೀಗ ಇವರಿಬ್ಬರ ನೆನಪಿನಲ್ಲಿ ಪ್ರತಿಮೆಯೊಂದನ್ನು ಮಾಡಿದ್ದಾರೆ. ನಂತರ ಪ್ರತಿಮೆಗೆ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿ ಮಕ್ಕಳ ಆಸೆ ನೆರವೇರಿಸಿದ್ದಾರೆ.

ಪ್ರತಿಮೆಗಳಿಗೆ ಮದುವೆ ನಡೆದಿರುವುದು ಗುಜರಾತ್​ನ ಗಾಂಧಿನಗರ ವ್ಯಾಪ್ತಿಯಲ್ಲಿ. ಮೃತ ಯುವತಿಯ ಅಜ್ಜ ಭೀಮಸಿಂಗ್ ಪಾದ್ವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಗಣೇಶ್ ಮತ್ತು ರಂಜನಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಸೋದರ ಸಂಬಂಧಿಗಳಾದ್ದರಿಂದ ವಿವಾಹಕ್ಕೆ ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಬೇಸತ್ತು, ಕಳೆದ ಆಗಸ್ಟ್​​​ನಲ್ಲಿ ಒಟ್ಟಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಮನೆ ಮಕ್ಕಳ ಸಾವಿನ ಘಟನೆಯಿಂದ ಎರಡೂ ಕುಟುಂಬಗಳು ನೊಂದುಕೊಂಡಿದ್ದವು. ಬದುಕಿದ್ದಾಗ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ. ಹೀಗಾಗಿ ಇನ್ನಾದರೂ ಒಟ್ಟಿಗೆ ಇರಲಿ ಎಂದು ಭಾವಿಸಿ ಪಶ್ಚಾತ್ತಾಪದಿಂದ ಮಕ್ಕಳ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ನಂತರ ವಿಧಿವಿಧಾನಗಳನ್ನು ಅನುಸರಿಸಿ ವಿವಾಹ ಮಾಡಿದ್ದೇವೆ. ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡೂ ಕುಟುಂಬಸ್ಥರು ಸೇರಿಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಎಂದು ಮೃತ ಯುವತಿ ರಂಜನಾ ಅಜ್ಜ ಭೀಮಸಿಂಗ್ ಪಾದ್ವಿ ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)