ಹಾಸನ/ಬೆಂಗಳೂರು: ಇಡೀ ದೇಶದಲ್ಲೇ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ಚುರುಕುಗೊಳಿಸಿದ್ದು, ಸಾಕ್ಷ್ಯಾ ಸಂಗ್ರಹದಲ್ಲಿ ತೊಡಗಿಕೊಂಡಿದೆ.
ಸದ್ಯ ಮಾಹಿತಿಯ ಪ್ರಕಾರ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸಿಗೆ, ದಿಂಬು, ಹೊದಿಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಪ್ರಜ್ವಲ್ ಮಲಗುತ್ತಿದ್ದ ಕೋಣೆಯಿಂದ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಎಲ್ಲವನ್ನು ಬೆಂಗಳೂರಿಗೆ ಕೊಂಡೊಯ್ದಿದೆ. ಹಾಸನದ ಆರ್.ಸಿ. ರಸ್ತೆಯಲ್ಲಿರುವ ಪ್ರಜ್ವಲ್ ನಿವಾಸದಲ್ಲಿ ಮಂಗಳವಾರ (ಮೇ 28) ಮಧ್ಯಾಹ್ನ ಎಸ್ಐಟಿ ಹಾಗೂ ಎಫ್ಎಸ್ಎಲ್ ತಂಡ ಪರಿಶೀಲನೆ ಆರಂಭಿಸಿ, ಬುಧವಾರ ಮುಂಜಾನೆ 4 ಗಂಟೆಯವರೆಗೂ ತನಿಖೆ ನಡೆಸಿದ ಬಳಿಕ ಪ್ರಜ್ವಲ್ ಮಲಗುವ ಕೋಣೆಯಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಮೇ 31ಕ್ಕೆ ಎಸ್ಐಟಿ ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಎಸ್ಐಟಿ ಸಾಕ್ಷ್ಯಾ ಸಂಗ್ರಹದಲ್ಲಿ ತೊಡಗಿದ್ದು, ಪ್ರಜ್ವಲ್ ಬಳಸುತ್ತಿದ್ದ ವಸ್ತುಗಳನ್ನು ಕಲೆಹಾಕುತ್ತಿದೆ.
ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದೇನು?
ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಅಂದು ರಾಜ್ಯ ಬಿಟ್ಟು ಹೋದ ಪ್ರಜ್ವಲ್, ಇಷ್ಟು ದಿನಗಳು ಕಳೆದರೂ ಸಹ ಬೆಂಗಳೂರಿಗೆ ಮರಳಿ ಬಂದಿಲ್ಲ. ಸರಣಿ ಆರೋಪಗಳು ವ್ಯಕ್ತವಾದರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮನವಿಗೂ ಸ್ಪಂದಿಸದ ಪ್ರಜ್ವಲ್, ರಾಜ್ಯಕ್ಕೆ ಹಿಂತಿರುಗಲೇ ಇಲ್ಲ. ಆದ್ರೆ, ಇತ್ತೀಚೆಗಷ್ಟೇ ವಿದೇಶದಿಂದಲೇ ವಿಡಿಯೋ ಸಂದೇಶ ಕಳುಹಿಸಿರುವ ಸಂಸದ, ರಾಜ್ಯದ ಜನತೆಗೆ ಕ್ಷಮೆಯಾಚಿಸಿದ್ದಾರೆ. ವಿದೇಶದಿಂದ ವಿಡಿಯೋ ರಿಲೀಸ್ ಮಾಡಿದ ಪ್ರಜ್ವಲ್ ರೇವಣ್ಣ, ರಾಜ್ಯದ ಜನತೆ, ನನ್ನ ತಾತ ಎಚ್.ಡಿ. ದೇವೇಗೌಡರು, ತಂದೆ ಮತ್ತು ತಾಯಿಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಇದೇ ಮೇ.31ರಂದು ರಾಜ್ಯಕ್ಕೆ ಬರುತ್ತೇನೆ, ಎಸ್ಐಟಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗುತ್ತೇನೆ. ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಇದು ಪ್ರೀ-ಪ್ಲ್ಯಾನ್ ಆಗಿತ್ತು” ಎಂದಿದ್ದಾರೆ.