ನ್ಯೂಸ್

ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ವಿಧಿವಶ

ಬೆಂಗಳೂರು: ಖ್ಯಾತ ಗಾಯಕ, ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ನಿಧನರಾಗಿದ್ದಾರೆ.

ಕರೊನಾ ಸೋಂಕಿನಿಂದ ಬಳಲುತ್ತಿದ್ದ ಎಸ್​ಪಿಬಿ ಅವರನ್ನು ಆ.5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿಂಗಳ ನಂತರ ಕರೊನಾ ನೆಗೆಟಿವ್​ ಎಂದು ಬಂದಿತ್ತಾದರೂ ಆರೋಗ್ಯದ ಸ್ಥಿತಿಯಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆ ಮುಂದುವರಿಸಲಾಗಿತ್ತು. ಗುರುವಾರ ಸಂಜೆ ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​ನಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಕೊನೆಯುಸಿರೆಳೆದರು. ಈ ವಿಷಯವನ್ನು ಅವರ ಪುತ್ರ ಚರಣ್​ ತಿಳಿಸಿದರು.

ಸ್ವರ ಸಂಗೀತ ಲೋಕದ ಮೋಡಿಗಾರ ಎಂದೇ ಪ್ರಸಿದ್ಧರಾದ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು 16 ಭಾಷಗಳಲ್ಲಿ ಸುಮಾರು 40 ಸಾವಿರ ಹಾಡುಗಳನ್ನು ಹಾಡಿದ್ದರು. 6 ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ದಕ್ಷಿಣ ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದ ಇವರು ಗಾಯನದಲ್ಲಷ್ಟೇ ಅಲ್ಲ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಸಾಧನೆ ಮಾಡಿದ್ದರು.