ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಕರೊನಾ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಸ್ಥಿತಿ ಗಂಭೀರವಾಗಿದ್ದರ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೀಗಿರುವಾಗಲೇ ಎಸ್ಪಿಬಿ ಚೇತರಿಸಿಕೊಂಡಿದ್ದಾರೆ. ವೆಂಟಿಲೇಟರ್ ಕಳಚಿ ಅವರೇ ಉಸಿರಾಡುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿ ವಲಯದಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ, ಹಾಗೆ ಹರಿದಾಡಿದ ಸುದ್ದಿ ಸುಳ್ಳು ಎಂದು ಸ್ವತಃ ಎಸ್ಪಿಬಿ ಪುತ್ರ ಎಸ್ಪಿ. ಚರಣ್ ಹೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ತುಣುಕೊಂದನ್ನು ಶೇರ್ ಮಾಡಿಕೊಂಡಿರುವ ಚರಣ್, ‘ನಿನ್ನೆಯ ಸ್ಥಿತಿ ಇಂದೂ ಮುಂದುವರಿದಿದೆ. ವೆಂಟಿಲೇಟರ್ ಇಲ್ಲದೆ ಇದೀಗ ಅವರೇ ಉಸಿರಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದೆಲ್ಲ ಸುಳ್ಳು. ಈಗಲೂ ಅವರು ವೆಂಟಿಲೇಟರ್ ಸಹಾಯದಿಂದಲೇ ಉಸಿರಾಡುತ್ತಿದ್ದಾರೆ. ಆ ಸುದ್ದಿ ನಿಜವಾಗಲಿ ಎಂದು ನಾನೂ ಬಯಸುತ್ತಿದ್ದೇನೆ. ನಿಮ್ಮ ಪ್ರಾರ್ಥನೆ ಹೀಗೆ ಮುಂದುವರಿಯಲಿ‘ ಎಂದಿದ್ದಾರೆ.
ಚೆನ್ನೈನ ಎಂಜಿಎಂ ಹೆಲ್ತ್ಕೇರ್ನಲ್ಲಿ ಆಗಸ್ಟ್ 5ರಂದು ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಸ್ಪಿಬಿ ಅವರನ್ನು ದಾಖಲಿಸಲಾಗಿತ್ತು. ಅಂದಿನಿಂದ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಶುಕ್ರವಾರ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. (ಏಜೆನ್ಸೀಸ್)