ನ್ಯೂಸ್

ಪರೀಕ್ಷೆ ಇರಲಿ; ಸಾರ್ವತ್ರಿಕ ಚುನಾವಣೆಯನ್ನೇ ನಡೆಸಲು ಮುಂದಾಗಿದೆ ಈ ದೇಶ

ನವದೆಹಲಿ: ಕರೊನಾ ಸಂಕಷ್ಟ ಯಾವಾಗ ಮುಗಿಯುತ್ತೆ ಎನ್ನುವುದು ಮಿಲಿಯನ್​ ಅಲ್ಲ, ಬಿಲಿಯನ್​ ಡಾಲರ್​ ಪ್ರಶ್ನೆ. ಸದ್ಯಕ್ಕಂತೂ ಇದು ಮುಗಿಯುವ ಲಕ್ಷಣಗಳಿಲ್ಲ ಎನ್ನುವುದಂತೂ ಸತ್ಯ. ಹೀಗಾಗಿ ಈ ಸಂಕಷ್ಟದ ನಡುವೆಯೇ ಎಲ್ಲ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬೇಕೋ, ಬೇಡವೂ ಎಂಬುದರ ಬಗ್ಗೆ ಭಾರಿ ಚರ್ಚೆಗಳಾದವು. ಭಾರಿ ವಿರೋಧ ವ್ಯಕ್ತವಾಯಿತು. ಆದರೆ, ಅತ್ತ ಸಿಂಗಾಪುರದಲ್ಲಿ ಸಾರ್ವತ್ರಿಕ ಚುನಾವಣೆಯನ್ನೇ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.

ಕರೊನಾ ಸಂಕಷ್ಟ ಯಾವಾಗ ಮುಗಿಯುತ್ತೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಅದರಿಂದಾಗಿ ಸಿಂಗಾಪುರ​ ಎದುರಿಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳನ್ನು ಎದುರಿಸಲು ಹೊಸದಾಗಿ ಜನಾದೇಶ ಪಡೆಯಬೇಕಾದ ಅಗತ್ಯವಿದೆ ಎಂದು ಪ್ರಧಾನಿ ಲೀ ಸಿಯೇನ್​ ಲೂಂಗ್​ ಹೇಳಿದ್ದಾರೆ.

ಚುನಾವಣೆ ನಡೆಸಲು ಮುಂದಿನ ಏಪ್ರಿಲ್​ ವರೆಗೆ ಕಾಲಾವಕಾಶವಿದೆ. ಆದರೂ ಈಗ ಜನಾದೇಶ ಪಡೆಯಬೇಕಿದೆ ಎಂಬುದು ಪ್ರಧಾನಿ ಅಭಿಪ್ರಾಯ. ಜುಲೈ 10 ರಂದು ಚುನಾವಣೆ ನಡೆಯಲಿವೆ ಹಾಗೂ ಅಭ್ಯರ್ಥಿಗಳು ಜೂನ್​ 30ರೊಳಗಾಗಿ ನಾಮಪತ್ರ ಸಲ್ಲಿಸಬೇಕಿದೆ.

ದೇಶದಲ್ಲಿ ಕರೊನಾ ಸೋಂಕು ಹಬ್ಬುವುದನ್ನು ನಿಯಂತ್ರಿಸಲಾಗಿದೆ. ಜತೆಗೆ, ಚುನಾವಣೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಸದ್ಯ ಚುನಾವಣೆ ಸಭೆ- ಸಮಾರಂಭಗಳನ್ನು ಆಯೋಜಿಸಲು ಅವಕಾಶವಿಲ್ಲ. ಏಕೆಂದರೆ, ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ.

ದಕ್ಷಿಣ ಕೊರಿಯಾದಲ್ಲೂ ಕಳೆದ ಏಪ್ರಿಲ್​ ಸಂಸತ್​ ಚುನಾವಣೆ ನಡೆಸಲಾಗಿತ್ತು. 3,000ಕ್ಕೂ ಅಧಿಕ ಕರೊನಾ ರೋಗಿಗಳಿಗೂ ಖುದ್ದಾಗಿ ಹಾಗೂ ಅಂಚೆ ಮೂಲಕ ಮತ ಚಲಾಯಿಸುವ ಅವಕಾಶವನ್ನು ನೀಡಲಾಗಿತ್ತು. ಅಲ್ಲಿ 1992ರ ಬಳಿಕ ಅತ್ಯಧಿಕ ಮತ ಚಲಾವಣೆ ಆಗಿತ್ತು.

ಇದಲ್ಲದೇ, ಅಮೆರಿಕದ ಕೆಲ ರಾಜ್ಯಗಳು ಹಾಗೂ ಸರ್ಬಿಯಾದಲ್ಲೂ ಚುನಾವಣೆಗಳು ನಡೆದಿವೆ.