ನವದೆಹಲಿ: ಕರೊನಾ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಲಾಕ್ಡೌನ್ ಮಾಡಲಾಗುತ್ತಿದೆ. ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಇದು ಜಾರಿಯಲ್ಲಿದೆ. ಇದನ್ನು ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಅಂಥವರ ವಿರುದ್ಧ ಕೇಸ್ ಕೂಡ ದಾಖಲಿಸಲಾಗುತ್ತಿದೆ.
ಆದರೆ, ಕರೊನಾ ನಿರ್ಬಂಧ ಪಾಲಿಸದ 10 ಭಾರತೀಯರನ್ನು ದೇಶದಿಂದಲೇ ಗಡಿಪಾರು ಮಾಡಿದೆ ಸಿಂಗಾಪುರ. ಅಷ್ಟೇ ಅಲ್ಲ, ಮತ್ತೆಂದೂ ತನ್ನ ದೇಶಕ್ಕೆ ಕಾಲಿರಿಸದಂತೆ ಸೂಚಿಸಿದೆ.
ವ್ಯಾಸಂಗ ವೀಸಾ ಹಾಗೂ ಉದ್ಯೋಗ ವೀಸಾ ಪಡೆದು ಸಿಂಗಾಪುರದಲ್ಲಿ ನೆಲೆಸಿದ್ದ ಭಾರತೀಯರು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ನಿಯಮ ಉಲ್ಲಂಘಿಸಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 50 ಸಾವಿರ ರೂ.ದಿಂದ ಒಂದು ಲಕ್ಷ ರೂ.ವರೆಗೆ ದಂಡವನ್ನೂ ವಿಧಿಸಲಾಗಿದೆ.
ಲಾಕ್ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿ ಅಥವಾ ತುರ್ತು ಸಂದರ್ಭ ಹೊರತು ಪಡಿಸಿ ಬೇರಾವುದಕ್ಕೂ ಮನೆ ಬಿಟ್ಟು ಹೊರಬರುವಂತಿರಲಿಲ್ಲ. ಆದರೆ, ಬಾಡಿಗೆ ಅಪಾರ್ಟ್ಮೆಂಟ್ವೊಂದರಲ್ಲಿ ಭಾರತೀಯರು ಪಾರ್ಟಿ ನಡೆಸಿದ್ದರು. ಇದು ಗೊತ್ತಾಗಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ; ಪೊಲೀಸರೇ ನನ್ನ ಎನ್ಕೌಂಟರ್ ಮಾಡ್ತಾರೆ…! ರಕ್ಷಣೆಗೆ ಸುಪ್ರೀಂಕೋರ್ಟ್ ಮೊರೆ ಹೋದ ಸಬ್ ಇನ್ಸ್ಪೆಕ್ಟರ್
ಅಪರಾಧ ಸಾಬೀತಾಗಿದ್ದರಿಂದ ನ್ಯಾಯಾಲಯ ಗಡಿಪಾರು ಶಿಕ್ಷೆ ವಿಧಿಸಿದೆ. ಅವರ ಪರವಾನಗಿಯನ್ನು ರದ್ದು ಪಡಿಸಲಾಗಿದೆ. ಮತ್ತೆಂದೂ ಸಿಂಗಾಪುರಕ್ಕೆ ಕಾಲಿಡದಂತೆಯೂ ಸೂಚಿಸಿದೆ.