ನವದೆಹಲಿ: ಗಾಲ್ವಾನ್ ಕಣಿವೆ ಕಲೆದ 2 ಶತಮಾನಗಳಿಂದಲೂ ಭಾರತದ ಆಡಳಿತಕ್ಕೆ ಒಳಪಟ್ಟಿದೆ ಎಂದು ಈ ಪ್ರದೇಶಕ್ಕೆ ಹೆಸರು ಗಾಲ್ವಾನ್ ಎಂಬ ಹೆಸರು ಬರಲು ಕಾರಣರಾದ ಗುಲಾಂ ರಸೂಲ್ ಗಾಲ್ವಾನ್ ಅವರ ಮೊಮ್ಮದ ಅಮೀನ್ ಗಾಲ್ವಾನ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಾಲ್ವಾನ ಕಣಿವೆಯಲ್ಲಿ ಹಲವು ಘಟನೆಗಳು ಸಂಭವಿಸುತ್ತಿವೆ. ಆದರೆ, ಈ ಪ್ರದೇಶ 200 ವರ್ಷಗಳಿಂದಲೂ ಭಾರತದ ಆಡಳಿತಕ್ಕೆ ಒಳಪಟ್ಟಿದ್ದಾಗಿದೆ. ಈ ಬಗೆಗಿನ ವಿವಾದವನ್ನು ಪರಿಹರಿಸಿಕೊಳ್ಳಲು ಯುದ್ಧ ಒಂದೇ ಪರಿಹಾರವಲ್ಲ. ಮಾತುಕತೆಯ ಮೂಲಕ ಇದನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಗಾಲ್ವಾನ್ನಲ್ಲಿನ ಜನತೆ ಸದಾ ಭಾರತೀಯ ಸೇನೆಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಮುಂದೆಯೂ ಕೂಡ ಭಾರತೀಯ ಸೇನೆಗೇ ಬೆಂಬಲ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಯಿಂದ ಇಲ್ಲಿನ ಜನ ಸ್ವಲ್ಪ ಹೆದರಿಕೊಂಡಿದ್ದಾರೆ. ಆದರೆ, ಇದರ ಅವಶ್ಯಕತೆ ಇಲ್ಲ. ಲಡಾಖ್ನ ಜನರು ಸದಾ ನಮ್ಮ ಸೇನಾಪಡೆಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧದ ಸಮರದಲ್ಲೂ ಅವರು ಹೀಗೆಯೇ ನಡೆದುಕೊಂಡಿದ್ದರು. ಹಾಗಾಗಿ ಈಗಲೂ ಕೂಡ ಅವರೆಲ್ಲರೂ ಭಾರತೀಯ ಸೇನಾಪಡೆಯನ್ನು ಬೆಂಬಲಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.
ಗಾಲ್ವಾನ್ ಕಣಿವೆ ಪ್ರದೇಶ ಭಾರತಕ್ಕೆ ಸೇರಿದ್ದರೂ, ಆಯಕಟ್ಟಿನ ಸ್ಥಳದಲ್ಲಿದೆ ಎಂಬ ಕಾರಣಕ್ಕಾಗಿ ಚೀನಾ ಈ ಪ್ರದೇಶದ ಮೇಲೆ ಕಣ್ಣಿಟ್ಟಿದೆ. ಅಲ್ಲದೆ, ಈ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು, ಭಾರತದ ವಿರುದ್ಧ ಕತ್ತಿಮಸೆಯುತ್ತಿದೆ. ಕಳೆದ ಸೋಮವಾರ ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಏರ್ಪಟ್ಟು ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಯೋಧರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸತ್ತಿರುವ ಮಾಹಿತಿ ಇದೆ.