Trump Tariffs: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಜತೆಗೆ ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಟ್ರಂಪ್ರನ್ನು ಟೀಕಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ವಿಧಿಸಿದ ಸುಂಕಗಳ ಬಗ್ಗೆ ಮಾತನಾಡಿದ ಜಾನ್ ಬೋಲ್ಟನ್, ಅಧ್ಯಕ್ಷರು ತಮ್ಮ ಭವ್ಯ ಕಾರ್ಯತಂತ್ರದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಅಲ್ಲದೆ, ಭಾರತವು ಅಮೆರಿಕದೊಂದಿಗೆ ವ್ಯವಹರಿಸುವುದು ಹೆಚ್ಚು ಕಷ್ಟಕರವಾಗಿದೆ. ಚೀನಾ ಮತ್ತು ರಷ್ಯಾದೊಂದಿಗೆ ಅಮೆರಿಕ ಏಕೆ ಅದೇ ರೀತಿ ಮಾಡುತ್ತಿಲ್ಲ ಎಂದು ಜಾನ್ ಪ್ರಶ್ನಿಸಿದ್ದಾರೆ. ಈ ವಿಧಾನವು ಭಾರತವನ್ನು ರಷ್ಯಾಕ್ಕೆ ಹತ್ತಿರಕ್ಕೆ ತಳ್ಳುತ್ತಿದೆ ಎಂದು ಜಾನ್ ನಿರಾಶೆ ವ್ಯಕ್ತಪಡಿಸಿದರು.
ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸುವ ಮೂಲಕ ಟ್ರಂಪ್ ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ. ಚೀನಾ ಭಾರತಕ್ಕಿಂತ ಹೆಚ್ಚು ರಷ್ಯಾದ ತೈಲವನ್ನು ಖರೀದಿಸುತ್ತಿದ್ದರೂ, ಅಮೆರಿಕವು ರಷ್ಯಾ ಅಥವಾ ಚೀನಾ ವಿರುದ್ಧ ನೇರ ಕ್ರಮ ಕೈಗೊಳ್ಳಲಿಲ್ಲ. ಟ್ರಂಪ್ ನೀತಿಯು ಭಾರತ-ಯುಎಸ್ ಸಂಬಂಧಗಳನ್ನು ಹಾನಿಗೊಳಿಸಿದ್ದಾರೆ. ಅಲ್ಲದೆ, ಸೋವಿಯತ್ ಒಕ್ಕೂಟದ ಪ್ರಭಾವದಿಂದ ಭಾರತವನ್ನು ದೂರವಿಡುವ ದಶಕಗಳ ಪಾಶ್ಚಿಮಾತ್ಯ ಯೋಜನೆಯನ್ನು ದುರ್ಬಲಗೊಳಿಸಿದೆ ಎಂದು ಬೋಲ್ಟನ್ ಕಿಡಿಕಾರಿದ್ದಾರೆ.
ಅಮೆರಿಕದೊಂದಿಗಿನ ಸುಂಕ ವಿವಾದದ ಬಗ್ಗೆ ಭಾರತದ ಮೌನ ಸರಿಯಾದ ವಿಧಾನವಾಗಿದೆ ಎಂದು ಬೋಲ್ಟನ್ ಭಾರತದ ನಿಲುವನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಟ್ರಂಪ್‌ನಂತಹ ವ್ಯಕ್ತಿಯನ್ನು ನಿಭಾಯಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಟ್ರಂಪ್ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದು ಮತ್ತು ಸಾರ್ವಜನಿಕ ವಿವಾದದಲ್ಲಿ ತೊಡಗಿಸಿಕೊಳ್ಳುವುದು ಪರಿಸ್ಥಿತಿಯನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಇದು ಚೀನಾದ ಸವಾಲನ್ನು ಎದುರಿಸಲು ಜಾಗತಿಕ ನೀತಿಯನ್ನು ದುರ್ಬಲಗೊಳಿಸುತ್ತಿದೆ. ಭಾರತ-ಯುಎಸ್ ಕಾರ್ಯತಂತ್ರದ ಸಹಕಾರಕ್ಕೆ ಹಾನಿಕಾರಕವೆಂದು ಸಾಬೀತುಪಡಿಸುತ್ತಿದೆ ಎಂದು ಬೋಲ್ಟನ್ ತಿಳಿಸಿದ್ದಾರೆ.
ಟ್ರಂಪ್ ಮೊದಲ ಅವಧಿಯಲ್ಲಿ ಬೋಲ್ಟನ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ವಿದೇಶಾಂಗ ನೀತಿಯ ಕುರಿತಾದ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮ ಹುದ್ದೆಗೆ ಬೋಲ್ಟನ್ ರಾಜೀನಾಮೆ ನೀಡಿದರು. ಅಂದಿನಿಂದ, ಬೋಲ್ಟನ್, ಟ್ರಂಪ್ ತೀವ್ರ ವಿಮರ್ಶಕರಾಗಿದ್ದಾರೆ. ಜಾನ್ ಟ್ರಂಪ್ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಬೋಲ್ಟನ್ ಮಾತ್ರವಲ್ಲದೆ, ಅರ್ಥಶಾಸ್ತ್ರಜ್ಞರು ಟ್ರಂಪ್ ಸುಂಕಗಳ ಪರಿಣಾಮದ ಬಗ್ಗೆ ಎಚ್ಚರಿಸಿದ್ದಾರೆ. ಇವು ಚೀನಾ ಮತ್ತು ರಷ್ಯಾಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)