ನವದೆಹಲಿ: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದು, ರಾಜಕೀಯ ಸಂರ್ಘಷಕ್ಕೆ ನಾಂದಿ ಹಾಡಿದೆ. ರಾಜ್ಯಪಾಲರ ಈ ನಡೆ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಗವರ್ನರ್ಗೆ ಟಕ್ಕರ್ ಕೊಡಲು ಒಂದಿಲ್ಲೊಂದು ಯೋಜನೆ ರೂಪಿಸುತ್ತಿದೆ. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ಅನ್ನು ಭೇಟಿ ಮಾಡಿದ್ದು, ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ.
ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿರುವ ಕಾಂಗ್ರೆಸ್ ಹೈ ಕಮಾಂಡ್ ಸಿಎಂ ಸಿದ್ದರಾಯ್ಯಗೆ ಫುಲ್ ಸಪೋರ್ಟ್ ನೀಡುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಚಾರ್ಜ್ಶೀಟ್ ಸಲ್ಲಿಸಿದ್ದು, ಇದರಲ್ಲಿ ಶಾಸಕರಾದ ದದ್ದಲ್ ಹಾಗೂ ನಾಗೇಂದ್ರ ಅವರ ಹೆಸರನ್ನು ಕೈ ಬಿಡಲಾಗಿದ್ದು, ಕ್ಲೀನ್ ಚಿಟ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಎರಡು ವಿಚಾರಕ್ಕೆ ಸಂಬಂಧಿಸಿದಂತೆ ದೋಸ್ತಿ ನಾಯಕರಿಗೆ ಟಕ್ಕರ್ ಕೊಡಲು ಕೈ ನಾಯಕರು ಯೋಜನೆ ರೂಪಿಸುತ್ತಿದ್ದು, ಮುಂದಿನ ನಡೆಯ ಕುರಿತು ಹೈಕಮಾಂಡ್ ಜೊತೆ ಚರ್ಚಿಸುತ್ತಿದ್ದಾರೆ. ಇದರ ಜೊತೆಗೆ ಮುಂಬರುವ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ, ಬಿಬಿಎಂಪಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ತಯಾರಿ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಸಭೆಯ ನಂತರ ಅಧಿಕೃತವಾಗಿ ತಿಳಿಯಲಿದೆ.