ನ್ಯೂಸ್

ಪ್ರತಾಪ್​ ಸಿಂಹಗೆ ಸಿದ್ದರಾಮಯ್ಯ 'ಬಾಸ್​'!

ಮೈಸೂರು: ಸಂಸದ ಪ್ರತಾಪ್​ ಸಿಂಹ ತನ್ನ ಟ್ವಿಟರ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪದೇಪದೆ 'ಬಾಸ್', 'ಬಾಸೂ' ಎಂದು ಉಲ್ಲೇಖಿಸುತ್ತಲೇ ಇದ್ದಾರೆ. ಇದನ್ನು ಕಂಡ ನೆಟ್ಟಿಗರೂ ಆಶ್ಚರ್ಯಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಸದ, ಸಿದ್ದರಾಮಯ್ಯ ಅವರನ್ನು ಬಾಸ್ ಅನ್ನೋದ್ರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

'ಸಿದ್ದರಾಮಯ್ಯ ಈ ರಾಜ್ಯವನ್ನು ಆಳಿದ ನಾಯಕರು‌. ಅವರೀಗ ವಿರೋಧ ಪಕ್ಷದ ನಾಯಕ, ಮೈಸೂರಿನ ಮಗ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ನಾನು ಯಾವಾಗಲೂ ಹಿರಿಯರಿಗೆ ಗೌರವ ಕೊಡುವವನು. ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡ್ತೀನಿ. ಬಾಸ್ ಅಂತ ಗೌರವದಿಂದಲೇ ಕರೆದಿದ್ದೇನೆ' ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ. ಇದನ್ನೂ ಓದಿರಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಬಂದ್​ಗೆ ಆಗ್ರಹಿಸಿ ಪ್ರತಿಭಟನೆ

ಪಿಎಂ ಕೇರ್ ಲೆಕ್ಕ ಕೊಡಿ ಎಂದು ಕೇಳಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಪ್ರತಾಪ್‌ಸಿಂಹ, 'ಕೋವಿಡ್ ನಿಯಂತ್ರಣದಲ್ಲಿ ಅಕ್ರಮ ಆಗಿದೆ ಅಂತೀರ. ದಾಖಲೆ ಪರಿಶೀಲನೆ ವಿಧಾನಸೌಧಕ್ಕೆ ಬನ್ನಿ ಅಂದ್ರೆ ಬರಲ್ಲ. ಆದ್ರೆ ಪಿಎಂ ಕೇರ್ ಲೆಕ್ಕವನ್ನು ಮಾತ್ರ ನೀವು ಕೇಳ್ತಿರಾ. ಇದು ಹೇಗೆ ಆಗುತ್ತೆ ಸಿದ್ದರಾಮಯ್ಯನವರೇ?' ಎಂದು ಪ್ರಶ್ನಿಸಿದ್ದಾರೆ.

'ನನಗೆ ಅದಕ್ಕಿಂತ ಖುಷಿಯಾಗಿದ್ದು ನಮ್ಮ ಸಂತೋಷ್‌ ಅವರ ಭಾಷಣವನ್ನು ನೀವು ಕೇಳಿದ್ದು. ಅವರು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ರೀತಿಯಲ್ಲಿ ನಮ್ಮ ರಾಜ್ಯದ ವಿರೋಧ ಪಕ್ಷಗಳಿಂದ ನಿರೀಕ್ಷೆ ಮಾಡಿದ್ದಾರೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದೆ ಅದಕ್ಕೆ ಯಾಕೆ ಮೋದಿ ಫಿಎಂ ಕೇರ್ ಫಂಡ್ ಮಧ್ಯ ತರ್ತೀರಾ? ನಿಮ್ಮ ಮಟ್ಟವನ್ನು ಪ್ರತಿ ಬಾರಿ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ರಾಜ್ಯದಲ್ಲಿರುವ ನಮ್ಮನ್ನು ಕೇಳಿ ನಾವೇ ಉತ್ತರ ಕೊಡ್ತೀವಿ' ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದರು.