ನ್ಯೂಸ್

ಕಾಂಗ್ರೆಸ್ ಪ್ರಚಾರ ಸಭೆಗೆ ಬಿಜೆಪಿ ಕಾರ್ಯಕತರ ಅಡ್ಡಿ: ಪೊಲೀಸರಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವರ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿದ ಘಟನೆ ಯಶವಂತಪುರದ ಬಿ.ಕೆ.ನಗರದಲ್ಲಿ ಮಂಗಳವಾರ (ಅ.27) ರಾತ್ರಿ ನಡೆದಿದೆ.

ಅಭ್ಯರ್ಥಿ ಕುಸುಮಾ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಯಶವಂತಪುರ ಕಾರ್ಪೋರೇಟರ್ ಜಿ.ಕೆ. ವೆಂಕಟೇಶ್​ ಬೆಂಬಲಿಗರಿಂದ ಗಲಾಟೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಸಿದ್ದರಾಮಯ್ಯ ಭಾಷಣದ ವೇಳೆ ಬಿಜೆಪಿಯ ಕಾರ್ಯಕರ್ತರು ಮೋದಿ... ಮೋದಿ ಎಂದು ಘೋಷಣೆ ಕೂಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಹೌದು ಹುಲಿಯ ಎಂದು ಕೂಗಿದರು. ಈ ವೇಳೆ ಸ್ಥಳದಲ್ಲಿ ಕೊಂಚ ಬಿಗುವಿನ ವಾತಾವರಣ ಉಂಟಾಗಿತ್ತು.

ಸಿದ್ದರಾಮಯ್ಯ ವಾಹನಕ್ಕೆ ಜಾಗ ಕೊಡದೇ ಗದ್ದಲ ಎಬ್ಬಿಸಲು ಜಿ.ಕೆ ವೆಂಕಟೇಶ್​ ಬೆಂಬಲಿಗರು ಯತ್ನಿಸಿದರು. ಈ ವೇಳೆ ಪೊಲೀಸ್ ಆಯುಕ್ತರಿಗೆ ಫೋನಾಯಿಸಿದ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಸ್ಥಳದಿಂದ ಬಿಜೆಪಿ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದ ಹೊರತು ಸ್ಥಳದಿಂದ ಕದಲೋದಿಲ್ಲ ಅಂತ ಸಿದ್ದರಾಮಯ್ಯ ಪಟ್ಟು ಹಿಡಿದರು. ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ ಬಳಿಕ‌ ಸಿದ್ದರಾಮಯ್ಯ ಸ್ಥಳದಿಂದ ತೆರಳಿದರು.