ನ್ಯೂಸ್

'ಸಂತ್ರಸ್ತೆ ಇನ್ನೂ ಸಿಕ್ಕಿಲ್ಲವೆಂದರೆ ನಾಚಿಕೆಗೇಡು, ಅವಳನ್ನ ಮೊದಲು ಹೊರಗೆ ಕರ್ಕೊಂಡು ಬನ್ನಿ..'

Mandara

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದ ವಿಚಾರವಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ವಿಡಿಯೋ ಹೊರಬಿದ್ದು 26 ದಿನಗಳಾದರೂ ಸಂತ್ರಸ್ತೆಯನ್ನು ಹುಡುಕಲಾಗದಿರುವುದು ನಾಚಿಕೆಗೇಡಿನ ವಿಚಾರ ಎಂದು ಅವರು ದೂರಿದ್ದಾರೆ.

ಇಂದು ಟ್ವಿಟ್ಟರ್​ನಲ್ಲಿ ಸಾಲು ಸಾಲು ಟ್ವೀಟ್​ ಮಾಡುವ ಮೂಲಕ ಸಿದ್ದರಾಮಯ್ಯನವರು ರಾಜ್ಯ ಸರ್ಕಾರದ ಕಾಲೆಳೆದಿದ್ದಾರೆ. ಈ ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ. ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ? ಪತ್ತೆ ಹಚ್ಚಲು ಆಗದಿರಲು ಎಂದು ಅವರು ದೂರಿದ್ದಾರೆ.

"ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು? ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ, ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ, ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ?" ಎಂದು ಅವರು ಪ್ರಶ್ನಿಸಿದ್ದಾರೆ.

ಯುವತಿಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ ಎನ್ನುವುದು ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಪೊಲೀಸರೇ ಆಕೆ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಆಕೆ ಮಾತಾನಾಡುತ್ತಿದ್ದಾಳೆ. ಈ ಬಗ್ಗೆ ಗೃಹ ಸಚಿವರಾದ ಬೊಮ್ಮಾಯಿ ಅವರು ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.