SIDDRAMAIAH 
ನ್ಯೂಸ್

ಬ್ರಾಹ್ಮಣ್ಯ ಬೆಳೆಯುವುದು ಬೇಡ, ಅವರ ಬುದ್ಧಿವಂತಿಕೆ ಬೆಳೆದರೆ ಸಾಕು ಎಂದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

Mandara

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನಡುವೆ ಸೋಮವಾರದ ವಿಧಾನಸಭೆ ಕಲಾಪದಲ್ಲಿ ಮಾತಿನ ಜುಗಲ್​ಬಂದಿಯೇ ನಡೆಯಿತು.

ಸಂವಿಧಾನ ಕುರಿತ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ಹಳೆಯ ಘಟನೆ ನೆನಪಿಸಿಕೊಂಡರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಜನತಾ ಪಕ್ಷ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೆಗಡೆಯವರನ್ನು ಹೊಗಳಿದ ರಾಚಯ್ಯ, ಹೆಗಡೆ ಬಹಳ ಬುದ್ಧಿವಂತರು ಎಂದರು. ಈ ವೇಳೆ ಜೆ.ಎಚ್. ಪಟೇಲ್ ಎದ್ದು ನಿಂತು, ಹೆಗಡೆ ಚಾಣಾಕ್ಷ ನಿಜ, ಅವರಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ನನಗೆ 800 ವರ್ಷಗಳ ಇತಿಹಾಸ (ಬಸವಣ್ಣ ಬಳಿಕ), ನಿಮ್ಮ ಇತಿಹಾಸ ಕೇವಲ 70 ವರ್ಷ (ಸ್ವಾತಂತ್ರ್ಯ ಬಂದ ನಂತರ) ಎಂದು ಹೇಳಿ ಕುಳಿತುಬಿಟ್ಟರಂತೆ ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.

ಈ ವೇಳೆ ಮಾತನಾಡಿದ ರಮೇಶ್​ಕುಮಾರ್, ಪರಮೇಶ್ವರ್ ಅವರನ್ನೂ ತುಂಬಾ ದಿನ ಬ್ರಾಹ್ಮಣ ಎಂದುಕೊಂಡಿದ್ದೆವು ಎಂದಾಗ ಪುನಃ ಇಡೀ ಸದನ ನಗೆಯಾಡಿತು. ಮಾತು ಮುಂದುವರಿಸಿದ ಸಿದ್ದರಾಮಯ್ಯ, ಚಾತುರ್ವರ್ಣ್ಯ ವ್ಯವಸ್ಥೆಯನ್ನು ಗಟ್ಟಿಯಾಗಿ ಬೆಳೆಸಿಕೊಂಡು ಬರಲಾಗಿದೆ. ಬ್ರಾಹ್ಮಣರ ಬುದ್ಧಿವಂತಿಕೆ ಬರಬೇಕೇ ಹೊರತು ಬ್ರಾಹ್ಮಣ್ಯ ಬೆಳೆಯಬಾರದೆಂದರು. ಆಗ ತಟಕ್ಕನೆ ಎದ್ದ ಆರ್.ವಿ. ದೇಶಪಾಂಡೆ, ಯಾರೂ ಜಾತಿಯಿಂದ ಹುಟ್ಟಲ್ಲ. ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೆಳೆದು ಬಂದಿದೆ. ಪರಿಸ್ಥಿತಿ ಮುಂಚಿನಂತೆ ಇಲ್ಲ, ಎಲ್ಲರಿಗೂ ಅವಕಾಶ ಸಿಗುತ್ತಿದೆ. ಬ್ರಾಹ್ಮಣರಿಗಾಗಿ ಯಾವುದಾದರೂ ಕಾನೂನು ಇದೆಯೇ ಹೇಳಿ ಎಂದು ಪ್ರಶ್ನಿಸಿದರು. ಈ ವೇಳೆ ಸಿದ್ದರಾಮಯ್ಯ ತಮಾಷೆಯಾಗಿ ಮಾತು ಮುಂದುವರಿಸಿ 32 ವರ್ಷದಿಂದ ಇದೇ ಮಾತನ್ನು ಕೇಳುತ್ತಲೇ ಇದ್ದೇನೆ ಎಂದಾಗ ಮತ್ತೆ ಸದನದಲ್ಲಿ ನಗೆ ತುಂಬಿಕೊಂಡಿತು.

ಇನ್ನು ಸಿದ್ದರಾಮಯ್ಯ ತಮ್ಮ ದೀರ್ಘ ಭಾಷಣದುದ್ದಕ್ಕೂ ಪಕ್ಕದಲ್ಲಿ ಕುಳಿತ ದೇಶಪಾಂಡೆ ಕಡೆ ತಿರುಗಿ ಮಾತನಾಡುವುದನ್ನು ಕಂಡು ಪ್ರತಿಪಕ್ಷ ನಾಯಕರು ಹಾಸ್ಯ ಮಾಡಿದರು. ಈಶ್ವರನ ಮುಂದೆ ಬಸವನನ್ನು ಕೂರಿಸಿದಂತಾಗಿದೆ ಎಂದು ಮಾಧುಸ್ವಾಮಿ ತಿವಿದರು.