ನ್ಯೂಸ್

ಶಾಲಾ ಮಕ್ಕಳಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗೆ ಯೋಗ, ಧ್ಯಾನದ ಅವಶ್ಯಕತೆಯಿದೆ ಎಂದ ಸಿದ್ದರಾಮಯ್ಯ...

ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇನ್ನು ಮುಂದೆ ಶಾಲೆಗಳಲ್ಲಿ 10 ನಿಮಿಷ ಧ್ಯಾನ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸರಣಿ ಟ್ವೀಟ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವರನ್ನು ಟೀಕಿಸಿದ್ದಾರೆ.

ಶಿಕ್ಷಣ ಸಚಿವರು ಹೇಳಿದಂತೆ ಶಾಲೆಗಳಲ್ಲಿ ಯೋಗ, ಧ್ಯಾನ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಸರ್ಕಾರ ಮೊದಲು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಬೋಧನಾ ಸಾಮಾಗ್ರಿಗಳನ್ನು ಒದಗಿಸಬೇಕು. ಇದರೊಂದಿಗೆ ಶಿಕ್ಷಕರ ನೇಮಕಾತಿ ಮಾಡಬೇಕು. ಶಾಲೆಗಳಲ್ಲಿ ಕ್ರೀಡಾ, ಸಂಗೀತ, ಕಲೆ ವಿಷಯಗಳಿಗೆ ಶಿಕ್ಷಕರ ನೇಮಕಾತಿ ಶೀಘ್ರವಾಗಿ ಆಗಬೇಕಿದೆ. ಸರ್ಕಾರ ಅಗತ್ಯವಾಗಿ ಆಗಬೇಕಿರುವ ಕೆಲಸ ಮಾಡುವುದು ಬಿಟ್ಟು, ಯೋಗ, ಧ್ಯಾನ ಮಾಡಿಸಲು ಹೊರಟಿದೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕರೊನಾ ಸಮಯದಲ್ಲಿ ಮಕ್ಕಳಿಗೆ ಆನ್​ಲೈನ್ ಕ್ಲಾಸ್ ಎಂದು ಮೊಬೈಲ್ ಹುಚ್ಚು ಹಿಡಿಸಲಾಗಿದೆ. ಈಗ ಆ ಮೊಬೈಲ್ ಹುಚ್ಚು ಬಿಡಿಸಲು ಧ್ಯಾನ, ಯೋಗ ನಾ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಜತೆಗೆ ಬಿ.ಸಿ.ನಾಗೇಶ್ ಶಿಕ್ಷಣ ಸಚಿವರಾಗಿದ್ದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ. ಪಠ್ಯ ಪುಸ್ತಕ ವಿವಾದ, ಶಿಕ್ಷಕರ ನೇಮಕಾತಿ ಹಗರಣಗಳು ನಡೆದಿವೆ ಎಂದು ಹೇಳಿದ್ದಾರೆ.

ಮಕ್ಕಳು ಆಟ ಆಡುತ್ತಾ, ಕುಣಿಯುತ್ತಾ ಪಾಠ ಕೇಳಿ ಬೇಳೆಯಬೇಕು. ಆದರೆ ಸರ್ಕಾರದ ನಿರ್ಧಾರದಿಂದ ಬಲವಂತವಾಗಿ ಮಕ್ಕಳನ್ನು ಕೊಣೆಯಲ್ಲಿ ಕೂಡಿ ಹಾಕಿ ಧ್ಯಾನ ಯೋಗ ಮಾಡಿಸುವಂತಾಗಿದೆ. ಮಕ್ಕಳಿಗಿಂತ ಶಿಕ್ಷಣ ಸಚಿವರಿಗೆ ಯೋಗ, ಧ್ಯಾನದ ಅವಶ್ಯಕತೆ ಇದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.