ನ್ಯೂಸ್

ಮಾಜಿ ಮುಡಾ ಆಯುಕ್ತ ದಿನೇಶ್ ಅಮಾನತು! ಸಿಎಂ ಸಿದ್ದರಾಮಯ್ಯರಿಂದ ಪರೋಕ್ಷ ತಪ್ಪೊಪ್ಪಿಗೆ: ಆರ್​. ಅಶೋಕ

ಬೆಂಗಳೂರು: 50:50ರ ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ವಿತರಿಸಿರುವ ಅಂಶವನ್ನು ಪ್ರಮುಖವಾಗಿ ಪರಿಗಣಿಸಿ ಮಾಜಿ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್​ರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಪೂರ್ವಾನ್ವಯವಾಗುತಂತೆ 50:50 ಅನುಪಾತದಲ್ಲಿ ನೀಡಿರುವುದೂ ಸಹ ತಪ್ಪು ಎಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ವಿಪಕ್ಷ ನಾಯಕ ಆರ್​. ಅಶೋಕ ವ್ಯಂಗ್ಯವಾಡಿದ್ದಾರೆ.

"ಮುಖ್ಯಮಂತ್ರಿಗಳು ಹಿಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ತಾಂತ್ರಿಕ ಸಮಿತಿ ಮೂಡಾ ಅಕ್ರಮದ ಬಗ್ಗೆ ವರದಿ ನೀಡಿ 10 ತಿಂಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೇಲಾಗಿ ತನಿಖೆ ನಡೆಯುತ್ತಿದ್ದರೂ ತಪ್ಪಿತಸ್ಥ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಇತ್ತೀಚೆಗಷ್ಟೇ ಕೇವಲ ನಾಲ್ಕು ದಿನಗಳ ಹಿಂದೆ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡುತ್ತೀರಿ. ಈಗ ದಿಢೀರನೆ ದಿನೇಶ್​ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದೀರಿ" ಎಂದರು.

"ಮುಡಾ ಹಗರಣ ಬಯಲಿಗೆ ಬಂದಾಗಿನಿಂದ ತಾವು ಗಲಿಬಿಲಿಗೊಂಡಿದ್ದೀರಿ, ಮಂಕಾಗಿದ್ದೀರಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದೀರಿ ಎಂದು ಸ್ವತಃ ತಮ್ಮ ಪಕ್ಷದವರೇ ಹೇಳುತ್ತಿದ್ದಾರೆ. ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಅಧಿಕಾರದಿಂದ ನಿರ್ಗಮಿಸಿ. ನಿಮ್ಮ ಗೌರವ ಕಾಪಾಡಿಕೊಳ್ಳುವುದರ ಜತೆಗೆ ರಾಜ್ಯದ ಗೌರವವನ್ನೂ ಉಳಿಸಿ" ಎಂದು ಸಿಎಂ ರಾಜೀನಾಮಗೆ ಒತ್ತಾಯಿಸಿದ್ದಾರೆ.