ಅಯೋಧ್ಯೆ: ರಾಮಮಂದಿರ ಭೂಮಿ ಪೂಜೆಗಾಗಿ ದೇಶದ ಅನೇಕರು ದೇಣಿಗೆಯನ್ನು ಸಮರ್ಪಿಸಿದ್ದಾರೆ. ಆಗಸ್ಟ್ 4ರವರೆಗೆ ಒಟ್ಟು 30 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಇಂದು ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಇಂದು ಆಗಸ್ಟ್ 4ರವರೆಗೆ ಅಂದಾಜು 30 ಕೋಟಿ ರೂ.ಸಂಗ್ರಹವಾಗಿದೆ. ನಾಳೆಯಷ್ಟರಲ್ಲಿ 11 ಕೋಟಿ ರೂ.ಇದಕ್ಕೆ ಸೇರ್ಪಡೆಯಾಗಲಿದೆ. ಈ ಹಣವನ್ನು ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರು ದೇಶದ ಜನರಿಂದ ಸಂಗ್ರಹ ಮಾಡಿದ್ದಾರೆ. ಇದನ್ನು ಹೊರತು ಪಡಿಸಿದರೆ ಸುಮಾರು 7 ಕೋಟಿ ರೂಪಾಯಿಯನ್ನು ವಿದೇಶದಲ್ಲಿರುವ ಭಾರತೀಯರು ದೇಣಿಗೆ ನೀಡಿದ್ದಾರೆ. ಆದರೆ ಈ ಹಣವನ್ನು ಸದ್ಯಕ್ಕೆ ನಾವು ಪಡೆದಿಲ್ಲ. ನಮ್ಮ ಟ್ರಸ್ಟ್ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿ ಪ್ರಮಾಣೀಕರಿಸಲ್ಪಟ್ಟ ನಂತರವಷ್ಟೇ 7 ಕೋಟಿ ರೂ.ನಮ್ಮ ಕೈಸೇರುತ್ತದೆ ಎಂದು ಗೋವಿಂದ್ ದೇವ್ ಗಿರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಭೂಮಿಪೂಜೆಗಾಗಿ ಬಿಎಸ್‌ವೈ ಮಾಡಿಕೊಂಡರೊಂದು ಮನವಿ…
ನಾಳೆ ಪ್ರಧಾನಮಂತ್ರಿ ಮೋದಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಹಲವು ಗಣ್ಯರು, ಪ್ರಮುಖರು, ಧಾರ್ಮಿಕ ಗುರುಗಳು, ಸಾಧು-ಸಂತರು ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.(ಏಜೆನ್ಸೀಸ್)