ನವದೆಹಲಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಮಹಾ ಮರುವಲಸೆಗಾಗಿ ಬೃಹತ್ ಪ್ರಮಾಣದಲ್ಲಿ ಏರ್ಲಿಫ್ಟ್ ನಡೆಸಲಾಗುತ್ತಿದೆ. ಕೊಲ್ಲಿ ರಾಷ್ಟ್ರಗಳಿಂದ ಬರುವವರಿಗಾಗಿ ಆಪರೇಷನ್ ಸಮುದ್ರ ಸೇತು ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ತಾಯ್ನಾಡಿಗೆ ಮರಳುತ್ತಿದ್ದಾರೆ.
ಇನ್ನೊಂದೆಡೆ, ಬೇರೆ ಬೇರೆ ರಾಜ್ಯಗಳಲ್ಲಿರುವ ತಮ್ಮವರನ್ನು ಕರೆಯಿಸಿಕೊಳ್ಳಲು ಆಯಾ ರಾಜ್ಯಗಳು ಮುಂದಾಗಿವೆ. ಇವರಲ್ಲಿ ಬಹುತೇಕರು ವಲಸೆ ಕಾರ್ಮಿಕರಾಗಿದ್ದಾರೆ. ಅವರಿಗಾಗಿ ಇದಕ್ಕಾಗಿ ವಿಶೇಷ ಬಸ್ಗಳನ್ನು ಕಾರ್ಯಾಚರಿಸಲಾಗುತ್ತದೆ. ಶ್ರಮಿಕ್ ಎಕ್ಸ್ಪ್ರೆಸ್ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ; ತಾಯ್ನಾಡು ಕರೆಸಿಕೊಳ್ಳುತ್ತಿಲ್ಲ, ಭಾರತ ವೀಸಾ ನೀಡುತ್ತಿಲ್ಲ; 55 ದಿನಗಳಿಂದ ವಿಮಾನ ನಿಲ್ದಾಣವೇ ಆತನಿಗೆ ಜಗತ್ತು
ಆದರೆ, ಸರ್ಕಾರ ತಮ್ಮವರನ್ನು ನಡೆಸಿಕೊಳ್ಳುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂಬ ಆಕ್ಷೇಪ, ಆಕ್ರೋಶ ವ್ಯಕ್ತವಾಗಿದೆ.
ಯಾರೇ ಎಲ್ಲಿಂದ ಬಂದರೂ ಅವರಿಗೆ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತಿದೆ. ಅಂತೆಯೇ, ವಿದೇಶಗಳಿಂದ ಬಂದವರನ್ನು ಪಂಚತಾರಾ ಹೋಟೆಲ್ಗಳಲ್ಲಿ (ಬೆಂಗಳೂರು ಸೇರಿ) ಇರಿಸಲಾಗುತ್ತಿದೆ. ವಿಪರ್ಯಾಸವೆಂದರೆ, ಪಕ್ಕದ ರಾಜ್ಯಗಳಿಂದ ಬರುವ ನಮ್ಮವರಿಗೆ ರೈಲಿನಲ್ಲಿ ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಅವರನ್ನು ಅವರ ಜಿಲ್ಲೆಗಳಲ್ಲಿ ಕಲ್ಯಾಣ ಮಂಟಪವೋ, ಛತ್ರ, ಶಾಲೆ ಮೊದಲಾದ ಕಡೆಗಳಲ್ಲಿ ತುಂಬಲಾಗುತ್ತಿದೆ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಈ ರೈಲುಗಳಲ್ಲಿ ಕಾರ್ಮಿಕರಿಂದ ಟಿಕೆಟ್ ಶುಲ್ಕ ಪಡೆಯುವ ವಿಚಾರವೂ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಕಳೆದ ಕೆಲ ದಿನಗಳಿಂದ ವಲಸೆ ಕಾರ್ಮಿಕರಿಗೆ ಆಹಾರ, ನೀರು ಸೌಲಭ್ಯದೊಂದಿಗೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ರೈಲುಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ರಾಜ್ಯಗಳಿಗೆ ಅವರನ್ನು ಕರೆದೊಯ್ಯಲಾಗುತ್ತಿತ್ತು. ಇದೀಗ ಶ್ರಮಿಕ್ ಎಕ್ಸ್ಪ್ರೆಸ್ ರೈಲುಗಳ ಎಲ್ಲ ಆಸನಗಳಲ್ಲೂ ಪ್ರಯಾಣಿಕರು ಸಂಚರಿಸಬಹುದು. ಅಂದರೆ, ಈವರೆಗೆ 1,200 ಪ್ರಯಾಣಿಕರಿಗೆ ಅವಕಾಶವಿದ್ದ ರೈಲಿನಲ್ಲಿ ಈಗ 1,700 ಜನರನ್ನು ಕರೆದೊಯ್ಯಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈವರೆಗೆ ನಿಲುಗಡೆರಹಿತ ಪ್ರಯಾಣವಾಗಿದ್ದ ಶ್ರಮಿಕ್ ಎಕ್ಸ್ಪ್ರೆಸ್ ರೈಲುಗಳು ಮೂರು ಕಡೆಗಳಲ್ಲಿ ನಿಲುಗಡೆ ನೀಡಲಿವೆ. ಪ್ರಯಾಣಿಕ ರೈಲುಗಳ ಸಂಚಾರವನ್ನು ಹಂತಹಂತವಾಗಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.