ಕೊಲ್ಕತಾ : ತಾವು ಚುನಾಯಿತರಾದಲ್ಲಿ, ಮತದಾರರಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಉಚಿತ ಪ್ರವಾಸದ ಅವಕಾಶ ಕಲ್ಪಿಸುವುದಾಗಿ ಆಶ್ವಾಸನೆ ಕೊಟ್ಟಿದ್ದ ಬಿಜೆಪಿ ಅಭ್ಯರ್ಥಿಗೆ, ಚುನಾವಣಾ ಆಯೋಗ ಶೋ ಕಾಸ್ ನೋಟೀಸ್ ಜಾರಿ ಮಾಡಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪಾಂಡಬೇಶ್ವರ್ನಿಂದ ಬಿಜೆಪಿ ಪರವಾಗಿ ಸ್ಪರ್ಧಿಸುತ್ತಿರುವ ಜಿತೇಂದ್ರ ತಿವಾರಿ ಅವರಿಗೆ ನೋಟೀಸು ಜಾರಿಯಾಗಿದೆ.
ತಿವಾರಿ ಅವರು, ಮಾರ್ಚ್ 21 ರಂದು ಹರಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮತ್ತು ಪಕ್ಷದ ಸಭೆಯಲ್ಲಿ - ಹೀಗೆ ಎರಡು ಸಂದರ್ಭಗಳಲ್ಲಿ ಅಯೋಧ್ಯೆಗೆ ಉಚಿತ ಪ್ರವಾಸ ಒದಗಿಸುವ ಭರವಸೆ ನೀಡಿದ್ದರು. ಈ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ ದೂರಿನ ಮೇಲೆ, ಆಯೋಗ ನೋಟೀಸ್ ಜಾರಿ ಮಾಡಿದೆ ಎನ್ನಲಾಗಿದೆ.
ಈ ನೋಟೀಸಿಗೆ ಪ್ರತಿಕ್ರಿಯೆ ನೀಡಿರುವ ತಿವಾರಿ ಅವರು, ಈ ರೀತಿ ವಚನ ನೀಡುವುದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಈ ಬಗ್ಗೆ "ತಿಳುವಳಿಕೆ ಹೊಂದಿಲ್ಲದ್ದಕ್ಕೆ" ಆಯೋಗದ ಕ್ಷಮೆ ಕೋರಿದ್ದಾರೆ. (ಏಜೆನ್ಸೀಸ್)