ನ್ಯೂಸ್

ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ! ಚಿಕನ್​ ತಿಂದ್ರೆ ನಮಗೂ ಕಾಯಿಲೆ ಬರುತ್ತಾ?

Mandara

ನವದೆಹಲಿ: ಕರೊನಾ ಸೋಂಕು ಕಡಿಮೆಯಾಗುಷ್ಟರಲ್ಲೇ ಕರೊನಾ ರೂಪಾಂತರಿ ಆವರಿಸಿಕೊಳ್ಳಲಾರಂಭಿಸಿದೆ. ಅದರ ಬೆನ್ನಲ್ಲೇ ಹಕ್ಕಿ ಜ್ವರವೂ ಕಾಣಿಸಿಕೊಳ್ಳಲಾರಂಭಿಸಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ರಾಜಸ್ಥಾನ, ಕೇರಳ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದಾಖಲಾಗಲಾರಂಭಿಸಿದ್ದು, ಜನರು ಚಿಕನ್​ ತಿನ್ನಲು ಹಿಂದೇಟು ಹಾಕುವಂತಾಗಿದೆ.

ಸಾಮಾನ್ಯವಾಗಿ ಹಕ್ಕಿ ಜ್ವರ ಕಾಣಿಸಿಕೊಂಡಾಗ ಚಿಕನ್​ ತಿನ್ನದಿರುವಂತೆ ಸೂಚನೆ ನೀಡಲಾಗುತ್ತದೆ. ಕೋಳಿಯಲ್ಲಿ ಹಕ್ಕಿ ಜ್ವರವಿದ್ದು, ಅದನ್ನು ನಾವು ಸೇವಿಸಿದರೆ ನಮಗೂ ಆ ರೋಗ ಅಂಟುವ ಸಾಧ್ಯತೆಯಿರುವುದರಿಂದಾಗಿ ಚಿಕನ್​ ತಿನ್ನಬೇಡಿ ಎಂದು ಹೇಳಲಾಗುತ್ತದೆ. ಅದೇ ಹಿನ್ನೆಲೆಯಲ್ಲಿ ಕೋಳಿ ಸಾಕಾಣಿಕೆ ಮಾಡಿದ ಅದೆಷ್ಟೋ ಜನ ಸಾವಿರಾರು ಕೋಳಿಗಳನ್ನು ಜೀವಂತ ಸಮಾಧಿ ಮಾಡಿರುವ ಪ್ರಕರಣಗಳನ್ನೂ ನಾವು ನೋಡಿದ್ದೇವೆ.

ಆದರೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಹೇಳುವ ಪ್ರಕಾರ, ಕೋಳಿ ಮಾಂಸ ತಿಂದ ಮಾತ್ರಕ್ಕೆ ಹಕ್ಕಿ ಜ್ವರ ಬಂದುಬಿಡುತ್ತದೆ ಎನ್ನುವಂತಿಲ್ಲ. ಮಾಂಸವನ್ನು ಸರಿಯಾದ ರೀತಿಯಲ್ಲಿ ಬೇಯಿಸಿ ತಿನ್ನುವುದರಿಂದ ಸೋಂಕು ನಮಗೆ ಹರಡುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಮಾಂಸವನ್ನು 75 ಡಿಗ್ರಿ ಸೆಲ್ಸಿಯಸ್​ನಲ್ಲಿ ಬೇಯಿಸಿದ ನಂತರ ಮಾತ್ರವೇ ಸೇವನೆ ಮಾಡಬೇಕು ಎಂದು ಸಂಸ್ಥೆ ಹೇಳಿಸಿದೆ. ಅದೇ ರೀತಿಯಲ್ಲಿ ಕೋಳಿ ಮೊಟ್ಟೆಯನ್ನೂ ಸರಿಯಾದ ರೀತಿಯಲ್ಲಿ ಬೇಯಿಸಿಯೇ ತಿನ್ನಬೇಕು. ಒಂದು ವೇಳೆ ಬೇಯಿಸಿದ್ದು ಸರಿಯಾಗಲಿಲ್ಲವೆಂದಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಡಬ್ಲ್ಯೂಡಚ್​ಒ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)