ಬಾರ್ಮೇರ್: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಮಗುವಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿರುವ ರಾಜಸ್ಥಾನದ ಬಾರ್ಮೇರ್ನಲ್ಲಿ ನಡೆದಿದೆ. ಈ ವಿಡಿಯೋ NCM ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಪೋಸ್ಟ್ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಮಗುವನ್ನು ಆಟವಾಡಿಸುತ್ತ ರೂಮ್ ಪ್ರವೇಶಿಸುವ ಮಹಿಳೆ ಹಾಸಿಗೆ ಮೇಲೆ ಮಲಗಿಸಿದ್ದ ಮತ್ತೊಂದು ಮಗುವಿನ ಬಾಯಿಗೆ ಪೋಲಿಯೋ ರೀತಿ ಡ್ರಾಪ್ಸ್ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಅದು ವಿಷ ಎಂದು ಹೇಳಲಾಗಿದ್ದು, ಆಕೆಯ ದುಷ್ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತಳ ಹೆಸರು ಜೇಥನಿ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಹಿಳೆ ತನ್ನ ಪತಿಯ ಸಹೋದರನ (ಮೈದುನ) ಮಗುವಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ಹಿಂದೆ ಇಬ್ಬರು ಮಕ್ಕಳನ್ನು ಈಕೆ ಇದೇ ರೀತಿ ಕೊಲೆ ಮಾಡಿದ್ದಳು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದರಿಂದಾಗಿ ಅನುಮಾನಗೊಂಡ ಕುಟುಂಬಸ್ಥರು ಆಕೆಯ ಚಲನವಲನದ ಮೇಲೆ ನಿಗಾ ವಹಿಸಿದ್ದರು ಮತ್ತು ಮಗು ಇರುವ ರೂಮ್ನಲ್ಲಿ ಕ್ಯಾಮರಾ ಹಾಕಿಸಿದ್ದರು. ಈ ಬಾರಿ ಮಗುವಿಗೆ ವಿಷ ಹಾಕಿದಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಳೆಂದು ಆಕೆ ಹೇಳಿಲ್ಲ. ಆದರೆ, ಇದಕ್ಕೂ ಮುನ್ನಮೈದುನನ ಇಬ್ಬರ ಮಕ್ಕಳಿಗೆ ವಿಷವುಣಿಸಿ ಕೊಂದಿದ್ದಾಗಿ ಹೇಳಿದ್ದಾಳೆ. ವಿಚಾರಣೆ ನಡೆಸಲಾಗುತ್ತಿದ್ದು, ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.