ನಾಶಿಕ್: ಕರ್ತವ್ಯನಿರತ ಪೊಲೀಸ್ ಇನ್ಸ್ಪೆಕ್ಟರ್ ಠಾಣೆಯಲ್ಲೇ ಸರ್ವೀಸ್ ರಿವಾಲ್ವರ್ನಿಂದ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಶಿಕ್ ನಗರದಲ್ಲಿ ಮಂಗಳವಾರ (ಫೆ.20) ಬೆಳಗ್ಗೆ ನಡೆದಿದೆ.
ಮೃತ ಪೊಲೀಸ್ ಇನ್ಸ್ಪೆಕ್ಟರ್ರನ್ನು ಅಶೋಕ್ ನಾಜನ್ ಎಂದು ಗುರುತಿಸಲಾಗಿದೆ. ನಾಶಿಕ್ ನಗರದ ಅಂಬಾದ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಗ್ಗೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ತಲೆಯಲ್ಲಿ ಬುಲೆಟ್ ಗಾಯದೊಂದಿಗೆ ಅವರ ಟೇಬಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಘಟನೆ ನಾಶಿಕ್ ನಗರದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ನಾಜನ್ ಅವರು ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ, ಈ ವಿಚಾರದಲ್ಲಿ ಪೊಲೀಸ್ ತನಿಖೆ ಆರಂಭವಾಗಿದೆ.
ನಾಜನ್ ಮೃತಪಟ್ಟ ಸಂಗತಿ ತಿಳಿಯುತ್ತಿದ್ದಂತೆ ನಾಶಿಕ್ ಪೊಲೀಸ್ ಕಮಿಷನರ್ ಸಂದೀಪ್ ಕಾರ್ಣಿಕ್ ಮತ್ತು ಕ್ರೈ ಬ್ರಾಂಚ್ ಅಸಿಸ್ಟಂಟ್ ಪ್ರಶಾಂತ್ ಬಚ್ಚೋ ಅಂಬಾದ್ ಪೊಲೀಸ್ ಠಾಣೆಗೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. (ಏಜೆನ್ಸೀಸ್)