ಬ್ಯಾಂಕಾಕ್: ಚಲಿಸುತ್ತಿದ್ದ ಆಂಬುಲೆನ್ಸ್ನಿಂದ ಇದ್ದಕ್ಕಿದ್ದಂತೆ ರೋಗಿಯ ಸಮೇತ ಸ್ಟ್ರೆಚರ್ ರಸ್ತೆಗೆ ಉರುಳಿ ಹಿಂಬದಿ ಸವಾರರನ್ನು ಕಕ್ಕಾಬಿಕ್ಕಿಯಾಗಿಸಿದ ಘಟನೆ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನ ವಾಹನನಿಬಿಡ ರಸ್ತೆಯಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಘಟನೆ ನಡೆದಿದೆ. ಚಾಲಕ ಚಾಲನೆಯಲ್ಲಿ ನಿರತನಾಗಿದ್ದಾಗ ಇದ್ದಕ್ಕಿದ್ದಂತೆ ವಾಹನದ ಹಿಂಬದಿ ಬಾಗಿಲು ತೆರೆದುಕೊಂಡು ರೋಗಿಯ ಸಮೇತ ಸ್ಟ್ರೆಚರ್ ರಸ್ತೆಗೆ ಉರುಳಿದೆ. ಮೊದಲೇ ವಾಹನ ನಿಬಿಡ ರಸ್ತೆಯಾಗಿದ್ದರಿಂದ ಹಿಂಬದಿ ಸವಾರರು ಕೆಲಕಾಲ ಕಕ್ಕಾಬಿಕ್ಕಿಯಾಗಿದ್ದಲ್ಲದೆ, ಟ್ರಾಫಿಕ್ ಜಾಮ್ಗೂ ಘಟನೆ ಕಾರಣವಾಯಿತು.
ರೋಗಿ ಕೆಳಗೆ ಬಿದ್ದಿದ್ದನ್ನು ಮನಗಂಡ ಚಾಲಕ ತಕ್ಷಣ ಆಂಬುಲೆನ್ಸ್ ನಿಲ್ಲಿಸಿದ್ದಾನೆ. ಈ ವೇಳೆ ಹಿಂದೆ ಬರುತ್ತಿದ್ದ ಬೈಕ್ ಸವಾರರ ನೆರವಿನಿಂದ ಮತ್ತೆ ರೋಗಿ ಹಾಗೂ ಸ್ಟ್ರೆಚರ್ ಅನ್ನು ಆಂಬುಲೆನ್ಸ್ ಒಳಗೆ ಹಾಕಿ, ಬಾಗಿಲು ಭದ್ರವಾಗಿ ಮುಚ್ಚಿ ಅಲ್ಲಿಂದ ಹೊರಟಿದ್ದಾನೆ.
ಮೊದಲೇ ಅಪಘಾತದಿಂದ ಗಾಯಗೊಂಡಿದ್ದ ರೋಗಿಗೆ ಈ ಘಟನೆಯು ಗಾಯದ ಮೇಲೆ ಬರೆ ಎಳೆಯಿತು. ತಡಮಾಡದೇ ವೇಗವಾಗಿ ಆಸ್ಪತ್ರೆಗೆ ಆಂಬುಲೆನ್ಸ್ ಚಲಾಯಿಸಿಕೊಂಡು ಬಂದ ಚಾಲಕ ಗಾಯಾಳುವನ್ನು ದಾಖಲಿಸಿದ್ದಾನೆ. ಅದೃಷ್ಟವಶಾತ್ ಹೆಚ್ಚೇನು ಗಾಯವಾಗಿರದಿದ್ದರಿಂದ ವ್ಯಕ್ತಿ ಬದುಕುಳಿದಿದ್ದಾನೆ. ಇನ್ನು ಅನಿರೀಕ್ಷಿತ ಘಟನೆ ಕುರಿತು ಸ್ವಯಂಪ್ರೇರಿತವಾಗಿ ಆಂಬುಲೆನ್ಸ್ ಸೇವೆ ಸಲ್ಲಿಸುವ ಪೋಹ್ ಟೆಕ್ ತುಂಗ್ ಫೌಂಡೇಶನ್ ಕ್ಷಮೆಯಾಚಿಸಿದೆ. (ಏಜೆನ್ಸೀಸ್)