ನ್ಯೂಸ್

ವಾಹನ ಸವಾರರಿಗೆ ಶಾಕ್! ಏರಿಕೆಯಾಯ್ತು ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ದರ | Toll hike

ಬೆಂಗಳೂರು: ಇಂದಿನಿಂದ (ಸೆ.01) ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಟೋಲ್ ದರಗಳನ್ನು ಏರಿಕೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ-4 (NH-4) ರ ಬೆಂಗಳೂರು-ನೆಲಮಂಗಲ ವಿಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪರಿಷ್ಕೃತ ಟೋಲ್ ಶುಲ್ಕವನ್ನು ಪಾವತಿಸುತ್ತಾರೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊರಡಿಸಿದ ಸಾರ್ವಜನಿಕ ಸೂಚನೆಯಲ್ಲಿ ತಿಳಿಸಲಾಗಿದೆ.

ಟೋಲ್ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂಬುದಾಗಿ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿತ್ತು. ಅದರಂತೆ ಮಧ್ಯರಾತ್ರಿಯಿಂದಲೇ ಟೋಲ್ ದರಗಳನ್ನು ಪರಿಷ್ಕರಿಸಲಾಗಿದೆ. ಇಂದು ಮಧ್ಯರಾತ್ರಿಯಿಂದ ನೆಲಮಂಗಲ ಹಾಗೂ ಹಾಸನ ರಾಷ್ಟ್ರೀಯ ಹೆದ್ದಾರಿ NH-75ರಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರವನ್ನು ಏರಿಕೆ ಮಾಡಲಾಗಿದೆ. ಇದರ ಪರಿಣಾಮ, ಲಘು ವಾಹನಗಳಿಗೆ ರೂ.10 ರಿಂದ 15ರಷ್ಟು ಹಾಗೂ ಭಾರೀ ಪ್ರಮಾಣದ ವಾಹನಗಳಿಗೆ ರೂ.50 ರಿಂದ 100 ರೂಪಾಯಿಯಷ್ಟು ಟೋರ್ ದರ ಏರಿಕೆಯಾಗಿದೆ. ಕಾರು, ಜೀಪ್, ವ್ಯಾನ್‌ನಂತಹ ಲಘು ವಾಹನಗಳಿಗೆ, ಬಸ್‌ಗಳು ಮತ್ತು ಟ್ರಕ್‌ಗಳಿಗೆ, ಹಾಗೂ ಭಾರೀ ವಾಹನಗಳಿಗೆ ಟೋಲ್ ಶುಲ್ಕವು ವಿಭಿನ್ನವಾಗಿರುತ್ತದೆ. ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕಮುಖ ಸಂಚಾರಕ್ಕೆ 5 ರೂ, ದ್ವಿಮುಖ ಸಂಚಾರಕ್ಕೆ 10 ರೂ. ದರ ಏರಿಕೆಯಾಗಿದೆ. ಫಾಸ್ಟ್​ಟ್ಯಾಗ್ ರಹಿತ 110 ರೂ. ಇದ್ದ ದರವನ್ನು 120 ರೂ.ಗೆ ಏರಿಕೆ ಮಾಡಲಾಗಿದೆ.

ಶುಲ್ಕ ಏರಿಕೆಗೆ ಕಾರಣ?

(ಏಜೆನ್ಸೀಸ್)

ಇನ್ನೂ ಈ ಹೆದ್ದಾರಿಯಲ್ಲಿ ಟೋಲ್ ದರಗಳನ್ನು ಏರಿಕೆ ಮಾಡಿರುವುದರಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೋಲ್ ಶುಲ್ಕದ ಏರಿಕೆಯು ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿದ್ದು, ಹಣದುಬ್ಬರ ಮತ್ತು ರಸ್ತೆ ನಿರ್ವಹಣೆಯ ವೆಚ್ಚದ ಏರಿಕೆಗೆ ಅನುಗುಣವಾಗಿ ಮಾಡಲಾಗುತ್ತದೆ. ಈ ಮಾರ್ಗದ ನಿರ್ವಹಣೆ ಮತ್ತು ದುರಸ್ತಿಗಾಗಿ ಹೆಚ್ಚಿನ ಹಣಕಾಸು ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.