ನೋಯ್ಡಾ: ಭಾರತದಲ್ಲಿ ಇಂಟರ್ನೆಟ್ ಕ್ರಾಂತಿ ನಡೆದು ಎಲ್ಲರ ಕೈಗೆ ಮೊಬೈಲ್ ತಲುಪಿದ ದಿನದಿಂದ ಸೋಷಿಯಲ್ ಮೀಡಿಯಾನಲ್ಲಿ ಒಂದಿಲ್ಲೊಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲ ವಿಡಿಯೋಗಳು ಮುಖದಲ್ಲಿ ನಗುವನ್ನು ತಂದರೆ, ಇನ್ನು ಕೆಲವು ಎದೆಯಲ್ಲಿ ನಡುಕವನ್ನು ಹುಟ್ಟಿಸುತ್ತವೆ.
ಈಗ, ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹುಟ್ಟು ಹಬ್ಬದ ಪಾರ್ಟಿ ಮುಗಿಸಿ, ಮನೆಗೆ ತೆರಳಲು ಮುಂದಾಗಿದ್ದ ಸ್ನೇಹಿತರು ಲಿಫ್ಟ್‌ನಲ್ಲಿ ಲಾಕ್ ಆಗಿರುವ ವಿಡಿಯೋವೊಂದು ಎಲ್ಲೆಡೆ ಸಕ್ಕತ್ ವೈರಲ್ ಆಗುತ್ತಿದೆ.
ಈ ಘಟನೆಯು ನೋಯ್ಡಾದ ಎಚ್&ಎಸ್ ಮಾಲ್ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ ಮಾಲ್ನ 31 ನೇ ಮಹಡಿಯಲ್ಲಿರುವ ರೋಮಿಯೊ ಲೇನ್ನಲ್ಲಿ ಇವರು ಹುಟ್ಟು ಹಬ್ಬದ ಆಚರಣೆಗಾಗಿ ಬಂದಿದ್ದಾರೆ. ಕೇಕ್ ಕತ್ತರಿಸಿ, ತಮ್ಮ ಮೋಜು- ಮಸ್ತಿ ಮುಗಿಸಿ ಮನೆಗೆ ತೆರಳಲು ಇವರು ಮುಂದಾಗಿದ್ದಾರೆ.
31 ನೇ ಫ್ಲೋರ್ನಿಂದ ಕೆಳಗೆ ಬರಲು ಈ ಎಂಟು ಜನ ಒಂದೇ ಲಿಫ್ಟ್ ಅನ್ನು ಏರಿದ್ದಾರೆ. ಆದರೆ ಇಂದೆರಡು ಮಹಡಿ ಕೆಳಗೆ ಹೋದ ನಂತರ ಲಿಫ್ಟ್ ದಿಢೀರನೇ ಸ್ತಬ್ದವಾಗಿ ಬಿಟ್ಟಿದೆ. ಇದೇ ಸಮಯಕ್ಕೆ ಮೊಬೈಲ್ಗೆ ಸರಿಯಾಗಿ ನೆಟ್ವರ್ಕ್ ದೊರೆಯದ ಹಿನ್ನಲೆ, ಆಚೆ ಇರುವ ಜನಕ್ಕೆ ಲಿಫ್ಟ್‌ನಲ್ಲಿ ಜನ ಸಿಲುಕಿದ್ದಾರೆ ಎಂಬ ಮಾಹಿತಿ ಕೂಡ ರವಾನೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಲಿಫ್ಟ್ ಒಂದೇ ಸಲ ಸ್ತಬ್ದವಾಗಿದ್ದು, ಹಾಗೂ ಮೊಬೈಲ್ಗೆ ನೆಟ್ವರ್ಕ್ ದೊರಕದ ಹಿನ್ನಲೆ ಲಿಫ್ಟ್ ಒಳಗಿದ್ದ ಜನರು ಕಿರುಚಲು, ಜೋರಾಗಿ ಕೂಗಲು ಶುರುವಿಟ್ಟಿದ್ದಾರೆ. ಆದರೆ ಇದರಿಂದಲೂ ಏನು ಪ್ರಯೋಜನವಾಗಿಲ್ಲ. ಹಾಗೆಯೇ, ಚಿಕ್ಕ ಲಿಫ್ಟ್‌ನಲ್ಲಿ ಎಂಟು ಜನರಿದ್ದ ಹಿನ್ನಲೆ ಉಸಿರಾಡಲು ಕೂಡ ಸಮಸ್ಯೆಯಾಗಿದೆ. ಲಿಫ್ಟ್ ಬಾಗಿಲನ್ನು ತೆಗೆಯಲು ಒಳಗಿದ್ದ ಜನರು ಶತ ಪ್ರಯತ್ನ ಮಾಡಿದ್ದಾರೆ. ಆದರೂ ಯಾವುದೇ ಸಫಲತೆ ದೊರೆತಿಲ್ಲ.
ನಂತರ, ಲಿಫ್ಟ್ನ ಆಚೆ ಇದ್ದವರಿಗೆ ಒಳಗೆ ಜನ ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿದೆ. ಆದರೆ ಆಚೆ ಇದ್ದವರು ಎಷ್ಟೆ ಪ್ರಯತ್ನ ಪಟ್ಟರೂ ಲಿಫ್ಟ್ಅನ್ನು ತೆಗೆಯಲು ಸಾಧ್ಯವಾಗಿಲ್ಲ. ಹೆಚ್ಚು ಕಡಿಮೆ ಈ ಹೋರಾಟ ಒಂದು ಗಂಟೆಗೂ ಹೆಚ್ಚಿನ ಸಮಯ ನಡೆದಿದೆ.
ನಂತರ ಮಾಲ್ನ ಭದ್ರತಾ ಸಿಬ್ಬಂದಿ ಹಾಗೂ ಲಿಫ್ಟ್ ಆಪರೇಟರ್ಗಳು ಸ್ಥಳಕ್ಕೆ ಆಗಮಿಸಿದ್ದು, ಆಧುನಿಕ ಪರಿಕರಗಳ ಮೂಲಕ ಲಿಫ್ಟ್ ಬಾಗಿಲನ್ನು ತೆಗೆದು ಸಿಲುಕಿದ್ದ ಎಂಟು ಜನರನ್ನು ರಕ್ಷಣೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್ಗಳ ಮಹಾಪೂರವೇ ಹರಿದು ಬಂದಿದೆ. ಈ ಹುಟ್ಟು ಹಬ್ಬವನ್ನು ಇವರು ಸಾಯುವವರೆಗೆ ಮರೆಯುವುದಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ದಿನೇ-ದಿನೇ ಈ ಲಿಫ್ಟ್ಗಳು ತೊಂದರೆ ಕೊಡುತ್ತಿರುವ ಸುದ್ದಿಗಳು ವರದಿಯಾಗುತ್ತಿದೆ. ಲಿಫ್ಟ್ ತಂತ್ರಜ್ಞಾನದಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಹೀಗೆ ಲಿಫ್ಟ್‌ನಲ್ಲಿ ಸಿಲುಕಿಕೊಂಡಾಗ ಭಯವಾಗುವುದು ಸಹಜ. ಆದರೆ ಕೂಗುವುದು, ಬಲವಂತವಾಗಿ ಲಿಫ್ಟ್ ಬಾಗಿಲನ್ನು ತೆರೆಯಲು ಮುಂದಾಗಬಾರದು. ಅಲರಾಂ ಅಥವಾ ತುರ್ತು ಕರೆ ಮಾಡಬೇಕೆಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ, (ಏಜೆನ್ಸೀಸ್).