ಬೆಂಗಳೂರು: ಕುಟುಂಬ ಕದನಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆದ್ದು ಬೀಗಿದ್ದು, ಎದುರಾಳಿ ಕಾಂಗ್ರೆಸ್ನ ಗೀತಾ ಶಿವರಾಜ್ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಾಜಿ ಸಿಎಂ ದಿ. ಬಂಗಾರಪ್ಪ ಅವರ ಕುಟುಂಬದ ಕಲಹ ಚುನಾವಣೆ ಮುಗಿದರೂ ನಿಲ್ಲುವಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ಬರೆದಿರುವ ಸುದೀರ್ಘ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಕುಮಾರ್ ಬಂಗಾರಪ್ಪ ಫೇಸ್ಬುಕ್ನಲ್ಲಿ ಮಾಡಿದ್ದ ಪೋಸ್ಟ್ನಲ್ಲಿ ತಮ್ಮ ಸಹೋದರ ಮಧು ಬಂಗಾರಪ್ಪ, ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಟೀಕಿಸಿರುವ ಜತೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್ ಅವರ ಬಗ್ಗೆ ಲಘುವಾಗಿ ಬರೆದಿದ್ದರು. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು ಎಂದು ಬರೆದುಕೊಂಡಿದ್ದರು.
ಕುಮಾರ್ ಬಂಗಾರಪ್ಪ ಅವರ ಈ ಫೋಸ್ಟ್ನಿಂದ ಆಕ್ರೋಶಗೊಂಡಿರುವ ಶಿವಣ್ಣ ಅಭಿಮಾನಿಗಳು, ಕುಮಾರ ಬಂಗಾರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಭಿಮಾನಿಗಳಿಗೆ ಪ್ರತಿಭಟನೆ ಮಾಡದಂತೆ ಮನವಿ ಮಾಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಶಿವರಾಜಕುಮಾರ್ ಅವರ ಬಗ್ಗೆ ರಾಜಕುಮಾರ್ ಕುಟುಂಬದ ಬಗ್ಗೆ ಮಾತಾಡಿದ್ದಾರೆ. ಇದು ನಮಗೆ ನೋವಾಗಿದೆ. ಅವರನ್ನ ಹೊರಗೆ ಕರೆಸಿ ಕ್ಷಮೆ ಕೇಳುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ.