ನ್ಯೂಸ್

ಮಧ್ಯಪ್ರದೇಶದಲ್ಲಿ ಗೋ ಸಂಪುಟ

ಭೋಪಾಲ್: ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸುವುದಾಗಿ ಘೋಷಿಸಿದ ಮಧ್ಯಪ್ರದೇಶದ ಸರ್ಕಾರ, ಈಗ ಗೋವುಗಳ ಸಂರಕ್ಷಣೆಗಾಗಿ ಗೋ ಸಂಪುಟ (ಕೌವ್ ಕ್ಯಾಬಿನೆಟ್) ರಚಿಸಲು ನಿರ್ಧರಿಸಿದೆ. ಇದರ ಮೊದಲ ಸಭೆ ನ. 22ರಂದು ಗೋ ಅಭಯಾರಣ್ಯ ಅಗರ್ ಮಾಲ್ವಾದಲ್ಲಿ ನಡೆಯಲಿದೆ.

ಪಶುಸಂಗೋಪನೆ, ಅರಣ್ಯ, ಪಂಚಾಯತ್​ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ, ರೈತರ ಕಲ್ಯಾಣ ಇಲಾಖೆಗಳ ಸಚಿವರು ಗೋ ಸಂಪುಟದಲ್ಲಿ ಇರಲಿದ್ದು, ಗೋವುಗಳ ಸಂರಕ್ಷಣೆ ಕುರಿತು ನಿಗಾ ವಹಿಸಲಿದ್ದಾರೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಗೋ ಸಂಪುಟಕ್ಕಿರುವ ಅಧಿಕಾರ ಮತ್ತು ಹೊಣೆ ಏನೆಂಬುದನ್ನು ಮಧ್ಯಪ್ರದೇಶ ಸರ್ಕಾರ ಇನ್ನಷ್ಟೆ ನಿರ್ಧರಿಸಬೇಕಿದೆ. ಗ್ರಾಮೀಣ ಪ್ರದೇಶದ ಪರ್ಯಾಯ ಔದ್ಯೋಗಿಕತೆ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ದೀಪಕ್ ವಿಜಯ ವರ್ಗೀಯಾ ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೋ ಸಂರಕ್ಷಣೆ ಪ್ರಮುಖ ವಿಷಯವಾಗಿತ್ತು. ಇತ್ತೀಚೆಗೆ ನಡೆದ 28 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಕಮಲ್​ನಾಥ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಗೋಪಾಲಕರಿಗೆ ಭತ್ಯೆ ಹೆಚ್ಚಿಸಿದ್ದರು. ದನಗಳ ಆಶ್ರಯ ನೀಡಲು ಒಂದು ಸಾವಿರ ಶೆಡ್ ನಿರ್ವಿುಸುವುದಾಗಿ ಘೋಷಿಸಿದ್ದರು. ಅಗರ್ ಮಾಲ್ವಾದಲ್ಲಿ ದೇಶದಲ್ಲೇ ಮೊದಲ ಗೋ ಅಭಯಾರಣ್ಯವನ್ನು 2017ರಲ್ಲಿ ಸ್ಥಾಪಿಸಿದ್ದು ಮಧ್ಯಪ್ರದೇಶ ಸರ್ಕಾರ.