|ರಾಘವ ಶರ್ಮ ನಿಡ್ಲೆ ನವದೆಹಲಿ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿನ್ನೆಯಷ್ಟೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ ತೊರೆದು ಸ್ವಂತ ಮನೆ ಮಾತೋಶ್ರೀ ಸೇರಿಕೊಂಡಿದ್ದರು. ಗುರುವಾರದ ಬೆಳವಣಿಗೆಗಳನ್ನು ಗಮನಿಸಿದಾಗ ಪಕ್ಷದ ಮುಖ್ಯ ಕಚೇರಿ ಶಿವಸೇನಾ ಭವನದಿಂದಲೂ ದೂರಾಗುವಂತಾಗಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಬಣದ ಕೈಮೇಲಾಗುತ್ತಿದ್ದು, ತಂದೆ ಬಾಳಾ ಠಾಕ್ರೆ ಕಟ್ಟಿದ ಪಕ್ಷದಲ್ಲಿ ಮಗ ಉದ್ಧವ್ಗೆ ಮೂಲೆಗುಂಪಾಗುವಂತಾಗಿದೆ. ಗುವಾಹಟಿಯಲ್ಲಿರುವ ಶಿವಸೇನೆ ನಾಯಕ, ಸಚಿವ ಏಕನಾಥ ಶಿಂಧೆ ಜತೆಗೆ 35 ಶಿವಸೇನೆ ಶಾಸಕರಿದ್ದು, ಈ ಸಂಖ್ಯೆ 39ಕ್ಕೇರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಸಿಎಂ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯ ಸನ್ನಿವೇಶ ನಿರ್ವಣವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈ ಬೆಳವಣಿಗೆಯಿಂದಾಗಿ ಪಕ್ಷದಲ್ಲಿ ಶಿಂಧೆ ಹಿಡಿತ ಗಟ್ಟಿಯಾಗಿದ್ದು, ಉದ್ಧವ್ ಅಧ್ಯಕ್ಷ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ.
ಶಾಸಕರಿಗೇಕೆ ಅಸಮಾಧಾನ?
ಶಾಸಕರು ಸಿಎಂ ಉದ್ಧವ್ ಬಗ್ಗೆ ಏಕೆ ಬೇಸರಗೊಂಡಿದ್ದಾರೆ ಎಂಬ ಕಾರಣಗಳನ್ನೊಳಗೊಂಡ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದರು. ಸಿಎಂ ಭೇಟಿ ಸಾಧ್ಯವಾಗುತ್ತಲೇ ಇರಲಿಲ್ಲ. ಅಧಿಕೃತ ನಿವಾಸದಲ್ಲೂ ಸಿಗುತ್ತಿರಲಿಲ್ಲ. ಖಾಸಗಿ ನಿವಾಸ ಮಾತೋಶ್ರೀ ಒಳಗೂ ಬಿಟ್ಟುಕೊಳ್ಳುತ್ತಿರಲಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಶಾಸಕರು ವಿನಾಕಾರಣ ತಾರತಮ್ಯ, ಮಾನಸಿಕ ಹಿಂಸೆ ಅನುಭವಿಸಬೇಕಾಗಿ ಬಂತು. ಹೀಗಿದ್ದರೂ ಸಿಎಂ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ ಎಂದು ಬಂಡಾಯ ಶಾಸಕರು ದಾಖಲಿಸಿದ್ದಾರೆ.
55 ಶಾಸಕರುಳ್ಳ ಶಿವಸೇನೆಯಲ್ಲಿ 37ಕ್ಕಿಂತ ಹೆಚ್ಚು ಶಾಸಕರು ಏಕನಾಥ ಶಿಂಧೆ ಗುಂಪಿನಲ್ಲಿ ಗುರುತಿಸಿಕೊಂಡು ಅವರೇ ನಮ್ಮ ನಾಯಕರು ಎಂದು ತಿಳಿಸಿದಲ್ಲಿ ಶಿಂಧೆ ಪಕ್ಷದ ನಾಯಕರಾಗುವುದಲ್ಲದೆ, ಚಿಹ್ನೆಯೂ ಶಿಂಧೆ ಗುಂಪಿನ ಪಾಲಾಗುತ್ತದೆ. ಮೇಲಾಗಿ, ಈ ಎಲ್ಲ ಶಿವಸೇನೆ ಶಾಸಕರು ಉಪಚುನಾವಣೆ ಎದುರಿಸುವ ಅಪಾಯದಿಂದಲೂ ಪಾರಾಗುತ್ತಾರೆ. ಗುರುವಾರ ಬೆಳಗ್ಗೆ ಉದ್ಧವ್ ಠಾಕ್ರೆ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರೂ, ಸಭೆಯಲ್ಲಿ ಹಾಜರಿದ್ದ ಶಾಸಕರ ಸಂಖ್ಯೆ ಕೇವಲ 13. ಅಂದರೆ, ಉಳಿದೆಲ್ಲ ಶಾಸಕರು ಶಿಂಧೆ ಜತೆ ಸೇರಿಕೊಂಡಿದ್ದಾರೆ.
ರಾಜ್ಯಪಾಲರಿಗೆ ಪತ್ರ: ಬಿಜೆಪಿ ಕೂಡ ಶಿಂಧೆ ಗುಂಪಿನ ಶಾಸಕರ ಸಂಖ್ಯೆ 37 ದಾಟುವುದನ್ನೇ ಕಾಯುತ್ತಿದೆ. ಬುಧವಾರ ರಾತ್ರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಶಿಂಧೆ ಬೆಂಬಲಿಗ 34 ಶಾಸಕರ ಗುಂಪು, ತಮ್ಮ ನಾಯಕ ಏಕನಾಥ ಶಿಂಧೆ ಮತ್ತು ನಾವೆಲ್ಲರೂ ಅವರನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದ್ದರು. ಗುರುವಾರ ಮಧ್ಯಾಹ್ನದ ಪತ್ರಿಕಾಗೋಷ್ಠಿಯಲ್ಲಿ ಶಿಂಧೆ ತಮ್ಮೊಂದಿಗೆ 35 ಶಿವಸೇನೆ ಶಾಸಕರು ಹಾಗೂ 7 ಪಕ್ಷೇತರ ಶಾಸಕರಿದ್ದಾರೆ ಎಂದು ತಿಳಿಸಿ, ಪಟ್ಟಿಯನ್ನೂ ಬಹಿರಂಗಪಡಿಸಿದ್ದಾರೆ. ಈ ಎಲ್ಲ ಶಾಸಕರು ಮಹಾಮೈತ್ರಿ ಸರ್ಕಾರದ ಸಹವಾಸ ಸಾಕೆಂದು ಶಿಂಧೆ ಗುಂಪಿಗೆ ಸೇರಿದ್ದು, ಮಹಾಮೈತ್ರಿ ಸರ್ಕಾರದಲ್ಲಿ ಮತ್ತೆ ಸೇರಿಕೊಳ್ಳುವ ಯಾವುದೇ ಉದ್ದೇಶ ಹೊಂದಿಲ್ಲ. ಉದ್ಧವ್ ಠಾಕ್ರೆ ಎಷ್ಟೇ ಮನವೊಲಿಸಿದರೂ ಶಿಂಧೆ, ‘ಈ ತೀರ್ವನದಿಂದ ಹಿಂದೆ ಬರುವ ಪ್ರಶ್ನೆಯೇ ಇಲ್ಲ. ನಮ್ಮ ಗಾಡಿ ಎಷ್ಟೋ ಮುಂದೆ ಹೋಗಿಯಾಗಿದೆ’ ಎಂದಿದ್ದಾರೆ.
ಸಂಸದರ ಬೆಂಬಲ: ಶಿಂಧೆ ಬಂಡಾಯ ನಿಲುವನ್ನು 12ಕ್ಕಿಂತಲೂ ಹೆಚ್ಚು ಸಂಸದರು ಕೂಡ ಬೆಂಬಲಿಸಿದ್ದು, ನಾವು ಶಿಂಧೆ ಜತೆಗಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಸದ್ಯ ಲೋಕಸಭೆಯಲ್ಲಿ ಶಿವಸೇನೆಯ 19 ಸಂಸದರಿದ್ದರೆ, ರಾಜ್ಯಸಭೆಯಲ್ಲಿ 3 ಸದಸ್ಯರಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅನೇಕ ಶಾಸಕ ಮತ್ತು ಸಂಸದರು ಎನ್ಡಿಎ ಮೈತ್ರಿಕೂಟಕ್ಕೆ ಮತ್ತೆ ಸೇರಿಕೊಳ್ಳಬೇಕು ಎಂದು ಉದ್ಧವ್ ಮನವೊಲಿಸುವ ಯತ್ನ ಮಾಡಿದ್ದರು. ಆದರೆ, ಉದ್ಧವ್ ಅದಕ್ಕೆ ಮಾನ್ಯತೆ ನೀಡಿರಲಿಲ್ಲ. ಈ ನಡುವೆ, ಶಿಂಧೆ ಮತ್ತು ಉದ್ಧವ್ ನಡುವೆ ಆಡಳಿತಕ್ಕೆ ಸಂಬಂಧಿಸಿ ವೈಮನಸ್ಯ ದುಪ್ಪಟ್ಟಾಗಿದ್ದಲ್ಲದೆ, ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಶಿಂಧೆ ಬೆಂಬಲಿತ ಶಾಸಕರ ಗುಂಪು ಬಿಜೆಪಿಗೆ ಪರೋಕ್ಷವಾಗಿ ಸಹಕಾರ ನೀಡಿತ್ತು. ಪರಿಷತ್ ಚುನಾವಣೆಯಲ್ಲಿ ಶಿವಸೇನೆಯ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಬಳಸಿಕೊಳ್ಳುವ ವಿಚಾರವಾಗಿ ಉದ್ಧವ್ ಪುತ್ರ ಆದಿತ್ಯ ಠಾಕ್ರೆ ಮತ್ತು ರಾಜ್ಯಸಭೆ ಸಂಸದ ಸಂಜಯ್ ರಾವತ್ ಹಾಗೂ ಶಿಂಧೆ ನಡುವೆ ತೀವ್ರ ವಾಗ್ವಾದ ಏರ್ಪಟ್ಟಿತ್ತು. ಹಲವು ದಿನಗಳಿಂದ ಅತೃಪ್ತ ಶಾಸಕರನ್ನು ಒಟ್ಟುಗೂಡಿಸುತ್ತಿದ್ದ ಶಿಂಧೆ, ಪರಿಷತ್ ಚುನಾವಣೆ ಪೂರ್ಣಗೊಳ್ಳುವುದಕ್ಕಾಗಿ ಕಾದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತಲೂ ಹೆಚ್ಚು ಸೀಟು ಗೆಲ್ಲುತ್ತಿದ್ದಂತೆಯೇ ಬಿಜೆಪಿ ನೆರವಿನೊಂದಿಗೆ ಶಾಸಕರನ್ನು ಕಟ್ಟಿಕೊಂಡು ಗುಜರಾತ್ಗೆ ಹಾರಿದ್ದರು. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಜತೆಗೆ ಶಿಂಧೆ ನಿರಂತರ ಸಂಪರ್ಕದಲ್ಲಿರುವುದು ಗುಟ್ಟಿನ ವಿಷಯವೇನಲ್ಲ.
ಮೈತ್ರಿ ತೊರೆಯುವ ಟ್ವೀಟ್: ಎನ್ಸಿಪಿ ನಾಯಕ ಶರದ್ ಪವಾರ್, ಅಜಿತ್ ಪವಾರ್, ಚಗನ್ ಭುಜಬಲ್ ಸೇರಿ ಹಲವರು ನಾವು ಮಹಾಮೈತ್ರಿ ಸರ್ಕಾರದೊಂದಿಗೆ ಇದ್ದೇವೆ. ಶಿವಸೇನೆ ಆಂತರಿಕ ಬಿಕ್ಕಟ್ಟು ಸರಿಯಾಗುವ ಭರವಸೆಯಿದೆ ಎಂಬ ಹೇಳಿಕೆಗೆ ಅಂಟಿಕೊಂಡಿದ್ದರು. ಗುರುವಾರ ಮಧ್ಯಾಹ್ನದ ವೇಳೆಗೆ ಶಿವಸೇನೆ ಮುಖಂಡ ಸಂಜಯ್ ರಾವತ್ ಮಹಾಮೈತ್ರಿ ತೊರೆಯಬೇಕೆಂಬ ನಿಮ್ಮ ಬೇಡಿಕೆ ಪರಿಶೀಲಿಸೋಣ ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು. ರಾವತ್ ಈ ನಿಲುವು ಕಾಂಗ್ರೆಸ್ ಮತ್ತು ಎನ್ಸಿಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.
ಚಿಹ್ನೆ ನಮಗೆ ನೀಡಿ: ಶಿವಸೇನೆ ಪಕ್ಷದ ಚಿಹ್ನೆ ತಮ್ಮ ಗುಂಪಿಗೆ ನೀಡಬೇಕೆಂದು ಶಿಂಧೆ ಬಣ ಪ್ರತಿಪಾದಿಸಿದೆ. ಕೆಲ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಬೇಕಿರುವುದರಿಂದ ಪಕ್ಷದ ಮೇಲಿನ ಹಿಡಿತ ಮುಖ್ಯವಾಗುತ್ತದೆ. ಸದ್ಯಕ್ಕೆ ಉದ್ಧವ್ ಮುಂದೆ ರಾಜೀನಾಮೆ ಬಿಟ್ಟು ಯಾವುದೇ ಆಯ್ಕೆಗಳು ಉಳಿದಂತೆ ಕಾಣುತ್ತಿಲ್ಲ. ಹೀಗಿದ್ದರೂ, 12 ರೆಬೆಲ್ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಮನವಿಯನ್ನು ಉದ್ಧವ್ ಠಾಕ್ರೆ ಬಣ ಸ್ಪೀಕರ್ಗೆ ಸಲ್ಲಿಸಿದೆ.
| ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
ರಾಷ್ಟ್ರೀಯ ಪಕ್ಷ ನಮ್ಮ ಜತೆಗಿದೆ ಎಂದ ಶಿಂಧೆ: ನಮ್ಮ ಬಂಡಾಯವನ್ನು ರಾಷ್ಟ್ರೀಯ ಪಕ್ಷವೊಂದು ಐತಿಹಾಸಿಕ ಎಂದು ಬಣ್ಣಿಸಿದೆ ಮತ್ತು ಎಲ್ಲ ರೀತಿಯ ಸಹಾಯ ಒದಗಿಸುವುದಾಗಿ ಭರವಸೆ ನೀಡಿದೆ ಎಂದು ಏಕನಾಥ ಶಿಂಧೆ ಗುವಾಹಟಿ ಹೊಟೇಲ್ನಲ್ಲಿ ಶಾಸಕರನ್ನು ಉದ್ದೇಶಿಸಿ ಹೇಳುತ್ತಿರುವ ವೀಡಿಯೊವನ್ನು ಮುಂಬೈನಲ್ಲಿರುವ ಅವರ ಕಚೇರಿ ಬಿಡುಗಡೆ ಮಾಡಿದೆ. ನಾವು ಒಗ್ಗಟ್ಟಾಗಿದ್ದೇವೆ ಮತ್ತು ಗೆಲುವು ನಮ್ಮದೇ ಆಗಿರುತ್ತದೆ. ನಮ್ಮೊಂದಿಗೆ ಮಹಾಶಕ್ತಿಯಾಗಿ ರಾಷ್ಟ್ರೀಯ ಪಕ್ಷವಿದೆ ಎಂದು ಶಿಂಧೆ ತಿಳಿಸಿದ್ದಾರೆ.