ನ್ಯೂಸ್

ಶಿವರಾಜ್​ಕುಮಾರ್​ಗೆ Cancer​ ತಗುಲಿದ್ದು ದೇಹದ ಯಾವ ಭಾಗಕ್ಕೆ ಗೊತ್ತಾ? ಶಸ್ತ್ರಚಿಕಿತ್ಸೆ ಹೇಗಿತ್ತು; ಅಪ್ಪನ ಕುರಿತಾಗಿ ,ಮಗಳ ಪೋಸ್ಟ್ ವೈರಲ್​

Webdesk - Manjunatha B

ಮಿಯಾಮಿ: ಕ್ಯಾನ್ಸರ್​ನಿಂದ (Cancer) ಬಳಲುತ್ತಿರುವ ಹ್ಯಾಟ್ರಿಕ್​ ಹೀರೋ ಡಾ. ಶಿವರಾಜ್​ಕುಮಾರ್​ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂತ್ರಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟ ಶಿವರಾಜ್​ಕುಮಾರ್ ಅವರು ಈ ವಿಚಾರವನ್ನು ಎಲ್ಲಿಯೂ ರಿವೀಲ್​ ಮಾಡಿರಲಿಲ್ಲ. ತದನಂತರ ಈ ವಿಚಾರವನ್ನು ರಿವೀಲ್​ ಮಾಡಿದ್ದರು.

ಕ್ಯಾನ್ಸರ್​ (Cancer) ತಗುಲಿರುವ ಮೂತ್ರಕೋಶವನ್ನು ತೆಗೆದುಹಾಕಿರುವ ವೈದ್ಯರು ಕರುಳನ್ನು ಬಳಸಿ ಕೃತಕ ಮೂತ್ರಕೋಶವನ್ನ ಅಳವಡಿಸಿದ್ದಾರೆ. ಸದ್ಯ ಅವರನ್ನು ಐಸಿಯುಗೆ ಶಿಫ್ಟ್​ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನೆಚ್ಚಿನ ನಟ ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದ ಅಭಿಮಾನಿಗಳಿಗೆ ಹಾಗೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಿವರಾಜ್​ಕುಮಾರ್​ ಪುತ್ರಿ ನಿವೇದಿತಾ ಧನ್ಯವಾದಗಳನ್ನು ತಿಳಿಸಿದ್ದು, ಈ ಕುರಿತಾಗಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ದೇವರ ಕೃಪೆಯಿಂದ ನನ್ನ ತಂದೆಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣರಾಗಿರುವ, ಮಿಯಾಮಿ ಹೆಲ್ತ್ ಕೇರ್ ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ. ಮುರುಗೇಸನ್ ಮನೋಹರನ್ ಅವರ ಅಚಲ ಬೆಂಬಲ ಮತ್ತು ಕಾಳಜಿಗೆ ನಮ್ಮ ಹೃತ್ತೂರ್ವಕ ಧನ್ಯಾದಗಳನ್ನು ಅರ್ಪಿಸುತ್ತೇವೆ.

ಈ ಪ್ರಯಾಣದಲ್ಲಿ ನನ್ನ ತಂದೆ ತೋರಿದ ಸ್ಥೆರ್ಯ ಮತ್ತು ಶಕ್ತಿಗೆ ಅವರೇ ಸಾಟಿ. ಈ ಸವಾಲುಗಳನ್ನು ಎದುರಿಸುವಲ್ಲಿ ಅವರು ತೋರಿದ ಮನೋಬಲ ನಮಗೂ ಆಶಾಭಾವ ಮೂಡಿಸಿ ನಮ್ಮೆಲ್ಲರಿಗೂ ಧೈರ್ಯ ಒದಗಿಸಿದೆ. ಇದರ ನಡುವೆ, ಎಲ್ಲಾ ಅಭಿಮಾನಿ ದೇವರುಗಳಿಗೂ, ಕುಟುಂಬ ಸದಸ್ಯರಿಗೂ, ಸ್ನೇಹಿತರಿಗೂ ಮತ್ತು ಮಾಧ್ಯಮದ ಸದಸ್ಯರಿಗೂ ನಾವು ನಮ್ಮ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದ ನಮ್ಮ ಶಕ್ತಿಯ ಮೂಲವಾಗಿದೆ. ನೀವೆಲ್ಲರೂ ತೋರಿದ ಕಾಳಜಿ ನಮಗೆ ಮುನ್ನಡೆಯುವ ಬಲ ತುಂಬಿದ್ದು, ಅದಕ್ಕೆ ನಾವೆಂದೆಂದಿಗೂ ಆಭಾರಿಯಾಗಿರುತ್ತೇವೆ.

ತಂದೆಯ ಚೇತರಿಕೆಯ ಕುರಿತು ಬರುವ ದಿನಗಳಲ್ಲಿ ತಿಳಿಸುತ್ತೇವೆ. ಈ ಪಯಣದಲ್ಲಿ ನಾವು ಮುಂದಿನ ಹೆಜ್ಜೆ ಇಡುತ್ತಿರಲು, ನಿಮ್ಮ ಪ್ರಾರ್ಥನೆಯ ಮೂಲಕ ನಮ್ಮನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇವೆಂದು ನಿವೇದಿತಾ ಶಿವರಾಜ್​ಕುಮಾರ್ ಪೋಸ್ಟ್​ ಮೂಲಕ ಅಭಿಮಾನಿಗಳಿಗೆ ಹಾಗೂ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.