ಬೆಂಗಳೂರು: ಕರ್ನಾಟಕ ರತ್ನ, ಪವರ್ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನದ ಸಂಭ್ರಮ. ಅಪ್ಪು ನಮ್ಮನ್ನು ದೈಹಿಕವಾಗಿ ಅಗಲಿದ್ದರು ಮಾನಸಿಕವಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಅವರ ಸಮಾಧಿ ಸ್ಥಳವಿರುವ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನದಾ, ರಕ್ತದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.
ಅಪ್ಪು ಜನ್ಮದಿನದ ಪ್ರಯುಕ್ತ ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿದ್ದಾರೆ. ನಟ ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅಪ್ಪುರನ್ನು ನೆನೆಸುತ್ತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಪ್ಪು ಆಗಿ ಬಂದ ನೀನು ಪುನೀತನಾಗಿ ಎಲ್ಲರ ಮನಸ್ಸಲ್ಲೂ ಭದ್ರವಾಗಿ ಇದ್ದುಬಿಟ್ಟೆ. ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ, ಎಷ್ಟೋ ಜನಕ್ಕೆ ನೀನು ಮಾರ್ಗದರ್ಶಿ, ಅವರ ಆರಾಧ್ಯ ದೈವ, ಕೋಟಿ ಕೋಟಿ ಅಭಿಮಾನಿಗಳಿಗೆ ಪ್ರೀತಿಯ ಪವರ್ ಸ್ಟಾರ್. ಆದರೆ ನನಗೆ ಎಂದೆಂದಿಗೂ ನನ್ನ ಪುಟ್ಟ ತಮ್ಮ. ನನ್ನ ಕೈ ಹಿಡಿದು ನಡೆದ ತಮ್ಮ, ನಿನ್ನ ನಗುವಲ್ಲಿ ನನ್ನ ಸಂತೋಷ ಹುಡುಕಿ ಕೊಟ್ಟ ತಮ್ಮ, ನನ್ನ ಎದೆಯ ಮೇಲೆ ಮಲಗಿದ ತಮ್ಮ. ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ ಎಂದು ನಟ ಪುನೀತ್ ರಾಜ್ಕುಮಾರ್ ಅವರ ಹಿರಿಯ ಸಹೋದರ ಶಿವರಾಜ್ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯಿಂದ ನಮ್ಮಹೃದಯಾಂತರಾಳವನ್ನು ಬೆಳಗಿಸುತ್ತಲೇ ಇದ್ದಾರೆ. ಅಪ್ಪು ಅವರು ಮಾನವೀಯತೆಯಲ್ಲಿ ಇರಿಸಿದ್ದ ಅಚಲ ಬದ್ಧತೆ ಅವರ ಹಾದಿಯಲ್ಲಿ ನಡೆಯಲು ನಮಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ ಎಂದು ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.