ಹೊಳೆಹೊನ್ನೂರು: ಸಮೀಪದ ಇಟ್ಟಿಗೆಹಳ್ಳಿಯಲ್ಲಿ ಗುಂಡಿಗಳಿಂದ ಕೂಡಿದ್ದ ರಸ್ತೆಯನ್ನು ಗ್ರಾಮಸ್ಥರೇ ಸೇರಿ ದುರಸ್ತಿ ಮಾಡಿಕೊಂಡಿದ್ದಾರೆ.
ಇಟ್ಟಿಗೆಹಳ್ಳಿ-ಆನವೇರಿ ರಸ್ತೆಯಲ್ಲಿ ಗುಂಡಿಗಳಾಗಿ ಸಂಚಾರ ದುಸ್ತರವಾಗಿತ್ತು. ರಸ್ತೆ ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿದ್ದವು. ರಸ್ತೆ ದುರಸ್ತಿ ಮಾಡುವಂತೆ ವರ್ಷದಲ್ಲಿ ಹತ್ತಾರು ಬಾರಿ ಲೋಕೊಪಯೋಗಿ ಇಲಾಖೆ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಕಷ್ಟವಾಗಿತ್ತು. ಶಾಲಾ ವಾಹನ ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಕೆಲ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು. ಸಮಸ್ಯೆ ಅರಿತ ಯುವಜನರು ಇಟ್ಟಿಗೆಹಳ್ಳಿ ಗ್ರಾಮದ ಗ್ರಾಪಂ ಸದಸ್ಯ ತಿಪ್ಪೇಶ್ ಹಾಗೂ ಪ್ರಭು, ಮಮತಾ ಸಹಯೋಗದಲ್ಲಿ ಹಣ ಹೊಂದಿಸಿದ್ದಾರೆ.
ಜೆಸಿಬಿ ಯಂತ್ರ ಬಳಸಿ ರಸ್ತೆ ಬದಿ ಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿಗೊಳಿಸಿದ್ದಾರೆ. ಜಲ್ಲಿ ಕಲ್ಲು ಮಿಶ್ರಣವನ್ನು ಗುಂಡಿಗಳಿಗೆ ಸುರಿದು ರಸ್ತೆ ದುರಸ್ತಿಯನ್ನು ಗ್ರಾಮಸ್ಥರೇ ಮಾಡಿಕೊಂಡಿದ್ದಾರೆ. 25-30 ಸಾವಿರ ರೂ. ವೆಚ್ಚವಾಗಿದೆ. ಯುವಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸದಸ್ಯ ತಿಪ್ಪೇಶ್, ಪರುಶು, ರಂಗನಾಥ್, ರವಿಕುಮಾರ್, ನಾಗರಾಜ್, ಸುನೀಲ್, ದೇವೇಂದ್ರ, ಮಲ್ಲೇಶ್, ಮನು, ಸುರೇಶ್, ಯಶ್ವಂತ್, ಕುಮಾರ್, ಮಧು, ರುದ್ರೇಶ್, ಪ್ರಭು, ಯೋಗೇಶ್, ಹನುಮಂತ, ಶಿವರಾಜ್, ಶರತ್, ಪ್ರಸನ್ನ, ವಿನಯ್ ಇತರರಿದ್ದರು.