ಭದ್ರಾವತಿ: ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌ನಿಂದ ಶುಕ್ರವಾರ ಆಯೋಜಿಸಿದ್ದ ಶ್ರೀ ಚೌಡೇಶ್ವರಿ ದೇವಸ್ಥಾನದ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ, ದೇವಿ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗೂ ದೀಪ ಸ್ತಂಭ ಪ್ರತಿಷ್ಠಾಪನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗಂಗಾಪೂಜೆ, ಆಲಯ ಪ್ರವೇಶ, ಪಂಚಾಮೃತ ಅಭಿಷೇಕ, ಅಲಂಕಾರ ಮೂರ್ತಿ ಕ್ಷೇಮ ಮಹಾಪ್ರತಿಷ್ಠೆ ಹಾಗೂ ಮಹಾಪೂರ್ಣಾಹುತಿ, ಅಭಿಜಿತ್ ಲಗ್ನದ ಶುಭ ಮುಹೂರ್ತದಲ್ಲಿ ಕಳಸಾರೋಹಣ ನಂತರ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಮುರಳಿಧರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
ಕಾಗದನಗರ 7ನೇ ವಾರ್ಡ್ ಶ್ರೀ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ತರಳಿಮಠ ನೇತೃತ್ವದಲ್ಲಿ ಅಮ್ಮನವರ ಮೂಲ ವಿಗ್ರಹ ಹಾಗೂ ಹೊರಭಾಗದಲ್ಲಿ ಉತ್ಸವ ಮೂರ್ತಿ ಮತ್ತು ಇತರ ದೇವಾನುದೇವತೆಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಶಾಸಕ ಜಿ.ಎಚ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್ ಇತರರಿದ್ದರು.