ಸೊರಬ: ರೈತರು ಭೂಮಿಯಲ್ಲಿನ ಗುಣ ವಿಶೇಷತೆ ತಿಳಿದುಕೊಳ್ಳದೆ ಉತ್ತಮ ಇಳುವರಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಮಣ್ಣಿನ ಪರೀಕ್ಷೆ ಮಾಡಿಸುವುದು ಅಗತ್ಯ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಅಂಜಲಿ ಹೇಳಿದರು.
ತಾಲೂಕಿನ ಉಳವಿ ಹೋಬಳಿ ವ್ಯಾಪ್ತಿ ಕಾನಹಳ್ಳಿ ಹಾಗೂ ಉಳವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಯೊಜನೆಯಡಿ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣಿನಲ್ಲಿ ಯಾವ ಪೋಷಕಾಂಶ ಇದೆ ಎನ್ನುವುದನ್ನು ಅರಿತು ಕೃಷಿ ಮಾಡಬೇಕು. ರೈತರು ಎರಡು ವರ್ಷಕ್ಕೊಮ್ಮೆ ಮಣ್ಣನ್ನು ಪ್ರತಿ 10 ಅಡಿ ಅಂತರದಲ್ಲಿ ತೆಗೆದು ಪರೀಕ್ಷೆ ಮಾಡಿಸಿ ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಲು ಮುಂದಾಗಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಸುಸ್ಥಿರತೆ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ವಿಜ್ಞಾನಿ ಡಾ. ಮಂಜುನಾಥ್ ಮಾತನಾಡಿ, ರೈತರಿಗೆ ಮುಂಗಾರುಪೂರ್ವ ಕೃಷಿ ಚಟುವಟಿಕೆಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ. ಸಮಗ್ರ ಕೃಷಿಗಾಗಿ ಅಭಿವೃದ್ಧಿಪಡಿಸಿದ ತಾಂತ್ರಿಕತೆ ಬಗ್ಗೆ ಇನ್ನೂ ರೈತರಿಗೆ ಗೊತ್ತಿಲ್ಲ. ಇದರಿಂದ ರೈತರ ಗ್ರಾಮಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಮಾಹಿತಿ ನೀಡುತ್ತಿದೆ ಎಂದರು.
ರಾಸಾಯನಿಕ ಗೊಬ್ಬರವನ್ನು ಬಳಸಿ ಅತಿಯಾದ ವೆಚ್ಚ ಮಾಡಿ ಕೃಷಿ ಬೆಳೆಯುತ್ತಿರುವ ರೈತ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದ್ದು, ರೈತರ ಅಭ್ಯುದಯವನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಅಗತ್ಯ ಮಾಹಿತಿಯನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಿದೆ. ಡಾ. ಮಂಜುನಾಥ್ ವಿಜ್ಞಾನಿ
ಶಿವಮೊಗ್ಗ ನವುಲೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಗಿರೀಶ್ ಮಾತನಾಡಿ, ಮಳೆಗಾಲ ಆರಂಭವಾಗುತ್ತಿದ್ದಂತೆ ಅಡಕೆಗೆ ತೇವಾಂಶ ಹೆಚ್ಚಾಗಿ ಗರಿಗಳು ಕೆಂಪಾಗುತ್ತವೆ. ತೋಟದಲ್ಲಿ ತೇವಾಂಶ ಕಡಿಮೆ ಮಾಡಿ ಬಸಿಕಾಲುವೆ ಹಾಗೂ ಪೋಷಕಾಂಶಯಕ್ತ ಗೊಬ್ಬರವನ್ನು ಮರಕ್ಕೆ ನೀಡಬೇಕು ಎಂದರು.
ಅಡಕೆ ಹಾಗೂ ಬಾಳೆ ತೋಟಗಳ ನಿರ್ವಹಣೆ, ದನದ ಗೊಬ್ಬರ ಬಳಕೆ ಹಾಗೂ ಲಘು ಪೋಷಕಾಂಶಗಳ ಬಳಕೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ವಿಜ್ಞಾನಿ ಡಾ. ನಾಗರಾಜ್, ಡಾ. ರಾಜಶೇಖರ್, ಡಾ. ಕಾಳಿದಾಸ, ಕೃಷಿ ಸಹಾಯಕ ಅಧಿಕಾರಿ ಕೆ.ಜಿ.ಕುಮಾರ್, ಉಳವಿ ಗ್ರಾಮ ಸಮಿತಿ ಅಧ್ಯಕ್ಷ ಸೋಮಶೇಖರಪ್ಪ, ಉಳವಿ ಕೃಷಿ ಅಧಿಕಾರಿ ಡಾ. ಪ್ರಜ್ವಲ್‌ಕುಮಾರ್ ಹಾಗೂ ರೈತರು ಹಾಜರಿದ್ದರು.