ಸಾಗರ: ರಾಜಕಾರಣಿಗೆ ಸಾಹಿತ್ಯದ ಸಾಂಗತ್ಯ ಇದ್ದರೆ ಉತ್ತಮ ಜನಪ್ರತಿನಿಧಿಯಾಗಬಹುದು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಉಮೇಶ್ ಕುಂಸಿ ಹೇಳಿದರು.
ನಗರದ ವರದಹಳ್ಳಿ ರಸ್ತೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಕಮಲಮ್ಮ ಕೆ.ಜಿ.ಒಡೆಯರ್ ದತ್ತಿ ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಚುನಾಯಿತ ಪ್ರತಿನಿಧಿಗಳು ಆಡಳಿತ ನಡೆಸುವ ದಿನಗಳಲ್ಲಿ ಯಾವ ರೀತಿ ಪ್ರಜಾಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ. ರಾಜಕಾರಣ, ಪ್ರಭುತ್ವ, ಸಾಹಿತ್ಯ ಬೇರೆಯಾದರೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ರಾಜಕಾರಣಿಗಳಿಗೆ ಸಾಹಿತ್ಯದ ಒಲವಿರಬೇಕು ಎಂದು ತಿಳಿಸಿದರು.
ರಾಜಕಾರಣಿಗಳಲ್ಲಿ ಓದಿನ ಕೊರತೆ ಎದ್ದು ಕಾಣುತ್ತಿದೆ. ನೈತಿಕ ಅಧಃಪತನ ಮುನ್ನೆಲೆಗೆ ಬರುತ್ತಿರುವ ಸಂಕೀರ್ಣ ಕಾಲಘಟ್ಟ ಇದಾಗಿದೆ. ಒಳ್ಳೆಯದನ್ನು ಹುಡುಕುವುದು ಕಷ್ಟದ ಕೆಲಸವಾಗಿದೆ. ಇಂತಹ ಹೊತ್ತಿನಲ್ಲಿ ನಮ್ಮನ್ನು ಪ್ರತಿನಿಧಿಸುವವರು ಅರ್ಹರು ಎನ್ನುವ ಮನೋಭಾವ ನಮಗೆ ಬರಬೇಕು ಎಂದರು.
ಡಾ. ಉಮೇಶ್ ಕುಂಸಿ, ನಿಲಯ ಮೇಲ್ವಿಚಾರಕ ಜಯಶೀಲ್ ಅವರನ್ನು ಅಭಿನಂದಿಸಲಾಯಿತು. ಪರಿಷತ್‌ನಿಂದ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ದತ್ತಿ ದಾನಿ ಜಗದೀಶ್ ಒಡೆಯರ್, ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ನಿಲಯ ಮೇಲ್ವಿಚಾರಕರಾದ ರಮೇಶಪ್ಪ, ಪ್ರಶಾಂತ್, ಪರಿಷತ್ ಗೌರವ ಕಾರ್ಯದರ್ಶಿ ಜಿ.ನಾಗೇಶ್, ಸಂಘಟನಾ ಕಾರ್ಯದರ್ಶಿ ಡಾ. ಪ್ರಸನ್ನ, ಲೋಕೇಶ್‌ಕುಮಾರ್, ಡಾ. ಕೆಳದಿ ವೆಂಕಟೇಶ್ ಜೋಯ್ಸ, ನಾರಾಯಣಮೂರ್ತಿ ಇತರರಿದ್ದರು.