ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆ, ಸೀಮಂತ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎಸ್.ನಟರಾಜ್, ಎಂ.ಮಾದೇಶ್, ವಾಣಿಶ್ರೀ, ಕೆ.ಮಂಜಪ್ಪ ಮತ್ತಿತರರಿದ್ದರು. 
ನ್ಯೂಸ್

ಪೌಷ್ಟಿಕ ಆಹಾರದ ಜಾಗೃತಿ ಅವಶ್ಯ

ಸಾಗರ: ಪೌಷ್ಟಿಕ ಆಹಾರ ಕುರಿತು ಜಾಗೃತಿ ಅಗತ್ಯ. ಪೋಷಣ್ ಅಭಿಯಾನದಂತಹ ಕಾರ್ಯಕ್ರಮ ಆಹಾರ ಪದ್ಧತಿ ಕುರಿತು ಅರಿವು ಮೂಡಿಸುತ್ತದೆ ಎಂದು ನ್ಯಾಯಾಧೀಶ ಎಸ್.ನಟರಾಜ್ ಹೇಳಿದರು.

ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರ ಶಿಬಿರ, ಅನ್ನ ಪ್ರಾಸನ, ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಹಾರ ಪದ್ಧತಿ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಬದಲಾದ ದಿನಗಳಲ್ಲಿ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಹಾರ ಪದ್ಧತಿಯಾಗಿದೆ ಎಂದರು.

ಆರೋಗ್ಯ ಸಲಹೆಗಾರ್ತಿ ವಾಣಿಶ್ರೀ ಮಾತನಾಡಿ, ಗರ್ಭಿಣಿಯರು ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಮಗುವಿನ ಬೆಳವಣಿಗೆ ಬಗ್ಗೆ ಗಮನ ಇರಬೇಕು. ಹೆರಿಗೆ ನಂತರ ಸಹ ಮಗುವಿನ ಆರೋಗ್ಯದ ಬಗ್ಗೆ ಬಾಣಂತಿಯರು ಗಮನ ಹರಿಸಬೇಕು ಎಂದು ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಮಂಜಪ್ಪ ಮಾತನಾಡಿ, ಇಲಾಖೆಯಿಂದ ಸೀಮಂತ ಕಾರ್ಯಕ್ರಮದ ಜತೆಗೆ ಅನ್ನ ಪ್ರಾಸನದಂತಹ ವಿಶೇಷ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಪ್ರಧಾನ ವ್ಯವಹಾರ ನ್ಯಾಯಾಧೀಶ ಎಂ.ಮಾದೇಶ್, ನಗರಸಭಾ ಸದಸ್ಯ ರವಿ ಉಡುಪ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಗಿರೀಶ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಶಶಿಕಾಂತ್, ಛಾಯಾ, ವನಜಾಕ್ಷಿ, ಶಾರದಾ ಬಂಗೇರಾ, ಸೌಮ್ಯಾ, ವಿದ್ಯಾ ಶಿವ ಹೆಗಡೆ ಇತರರಿದ್ದರು.