ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಕೆ.ಸತೀಶ್, ಉಪಾಧ್ಯಕ್ಷರಾಗಿ ಬಸವರಾಜ್ ಆಯ್ಕೆಯಾದರು. ಎಸ್.ಬಿ.ರಘುನಾಥ್, ಉಮೇಶ್ ಹಿರೇನಲ್ಲೂರು, ಡಾ. ಬಿ.ಎಸ್.ಪ್ರಭಾಕರ್ ಇತರರಿದ್ದರು. 
ನ್ಯೂಸ್

ಸಹಕಾರ ಕ್ಷೇತ್ರದಲ್ಲಿ ಸಾಲ ಪ್ರಕ್ರಿಯೆ ಸರಳ

ಸಾಗರ: ಗೃಹ ನಿರ್ಮಾಣ ಸಂಬಂಧಿ ಚಟುವಟಿಕೆಗಳು ಹೆಚ್ಚಾಗಬೇಕು. ನಮ್ಮ ಸಂಸ್ಥೆಯಿಂದ ಮನೆ ನಿರ್ಮಾಣ ಹಾಗೂ ದುರಸ್ತಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಹೌಸ್ ಬಿಲ್ಡಿಂಗ್ ಸೊಸೈಟಿ ನೂತನ ಅಧ್ಯಕ್ಷ ಕೆ.ಸತೀಶ್ ಹೇಳಿದರು.

ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಆದರೆ ಸಹಕಾರ ಸಂಸ್ಥೆಗಳು ಷೇರುದಾರರಿಗೆ ಸುಲಭವಾಗಿ ಸೌಲಭ್ಯ ನೀಡುವ ಮೂಲಕ ಆಪ್ತವಾಗುತ್ತಿವೆ ಎಂದು ತಿಳಿಸಿದರು.

ಸಹಕಾರ ಸಂಘಗಳಲ್ಲಿ ವ್ಯವಹಾರ ಮಾಡುವ ಗ್ರಾಹಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಮ್ಮ ಸೊಸೈಟಿಯು ಸಾಮಾನ್ಯ ಜನರ ಸೂರಿನ ಕನಸು ನನಸು ಮಾಡುತ್ತಿದೆ. ಎರಡನೇ ಬಾರಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಡಳಿತ ಮಂಡಳಿ ಅವಕಾಶ ಕಲ್ಪಿಸಿರುವುದು ಸಂತೋಷ ತಂದಿದೆ ಎಂದರು.

ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಸ್.ಬಿ.ರಘುನಾಥ್ ಮಾತನಾಡಿ, ಸಹಕಾರ ಸಂಘಗಳು ರಾಜಕೀಯೇತರ ಆಗಿರಬೇಕು. ಸಹಕಾರ ಸಂಘಕ್ಕೆ ಆಯ್ಕೆಯಾಗಿ ಬಂದ ಮೇಲೆ ಉತ್ತಮ ಕೆಲಸ ಮಾಡಬೇಕು. ಸೊಸೈಟಿ ಲಾಭದಾಯಕ ಸ್ಥಿತಿಯಲ್ಲಿದ್ದು, ನೂತನ ಆಡಳಿತ ಮಂಡಳಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಒಯ್ಯುವ ಚಿಂತನೆ ನಡೆಸಬೇಕು. ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ನಾವು ನೀಡುತ್ತಿರುವ ಆರ್ಥಿಕ ಸಹಕಾರ ಹೆಚ್ಚು ಪ್ರಯೋಜನವಾಗುತ್ತಿದೆ. ಸಾಲ ಪಡೆದವರ ಆಸ್ತಿ ಹರಾಜು ಹಾಕದೆ ಮನವೊಲಿಸಿ ಸಾಲ ಮರುಪಾವತಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷರಾಗಿ ಬಸವರಾಜ್ ಆಯ್ಕೆಯಾದರು. ಚುನಾವಣಾಧಿಕಾರಿ ಜಿ.ರೂಪಾ, ಪ್ರಮುಖರಾದ ಉಮೇಶ್ ಹಿರೇನೆಲ್ಲೂರು, ಡಾ. ಬಿ.ಎಸ್.ಪ್ರಭಾಕರ್, ಆರ್.ಚಂದ್ರು, ಉಷಾ, ಸುಜಾತಾ, ವೀರರಾಜ ಜೈನ್, ಮಂಜಪ್ಪ, ಪ್ರಮೋದ್ ಇತರರಿದ್ದರು.