ಸೊರಬ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಆಡಳಿತಾಧಿಕಾರಿ ಡಾ. ಕಿರಣ್‌ಕುಮಾರ್ ಮಾತನಾಡಿದರು. ಶಶಿಧರ್, ಶ್ರೀರಾಮ್ ಇತರರಿದ್ದರು.  
ನ್ಯೂಸ್

ಸಕಾಲದಲ್ಲಿ ಯೋಜನೆ ತಲುಪಿಸಿದರೆ ಮೂಡುವುದು ಭರವಸೆ

ಸೊರಬ: ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳು ಸಕಾಲದಲ್ಲಿ ತಲುಪುವಂತೆ ಅಧಿಕಾರಿಗಳು ಕೆಲಸ ಮಾಡಿದಲ್ಲಿ ಇಲಾಖೆಗಳ ಮೇಲೆ ಸಾರ್ವಜನಿಕರಿಗೆ ವಿಶ್ವಾಸ ಹೆಚ್ಚುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಕಿರಣ್‌ಕುಮಾರ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಹಾಗೂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ಸೌಲಭ್ಯಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಸಾರ್ವಜನಿಕ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕರೊನಾ, ಡೆಂೆ ಹಾಗೂ ಇತರ ಕಾಯಿಲೆಗಳ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಆದೇಶದಂತೆ ಎಸ್‌ಒಪಿ ಘಟಕಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಮೇನಲ್ಲಿ ಹೆಚ್ಚುವರಿ ಮಳೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ಬಿತ್ತನೆಯಾದ ಶೇ. 20-25ರಷ್ಟು ಮೆಕ್ಕೆಜೋಳ ಮತ್ತು ಭತ್ತದ ಬೆಳೆ ಮಳೆಗೆ ಸಿಲುಕಿ ತೊಂದರೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ ಮಾಹಿತಿ ನೀಡಿದರು. ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡುವಂತೆ ಕಿರಣ್‌ಕುಮಾರ್ ಸೂಚಿಸಿದರು.

ರಸಗೊಬ್ಬರ ಕೊರತೆ ಇಲ್ಲ. ಹಾಲಿ 5,020 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಬಿತ್ತನೆ ಬೀಜ ಸಹ ಲಭ್ಯವಿದ್ದು, ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಉಳವಿ ರೈತ ಸಂಪರ್ಕ ಕೇಂದ್ರಕ್ಕೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಕೆ.ಜಿ.ಕುಮಾರ ಪ್ರಸ್ತಾಪಿಸಿದರು. ಈ ಬಗ್ಗೆ ಕ್ರಮ ವಹಿಸುವಂತೆ ಜಿಪಂ ಸಹಾಯಕ ನಿರ್ದೇಶಕ ಮುರುಗೇಶ್ ಅವರಿಗೆ ತಿಳಿಸಿದರು.

ಹಿರಿಯ ಅಧಿಕಾರಿಗಳಿಗೆ ನೋಟಿಸ್: ಸೊರಬ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಗೈರಾಗಿದ್ದ ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಪಂ ಆಡಳಿತಾಧಿಕಾರಿ ಡಾ. ಕಿರಣ್‌ಕುಮಾರ್ ಸೂಚಿಸಿದರು. ಸಭೆ 11ಕ್ಕೆ ಇದ್ದರೂ ಅಧಿಕಾರಿಗಳ ಹಾಜರಾತಿ ಇರಲಿಲ್ಲ. ತಡವಾಗಿ ಬಂದರೂ ಕೆಲವು ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಬರದೆ ಕೆಳಹಂತದ ಅಧಿಕಾರಿಗಳನ್ನು ಸಭೆಗೆ ಕಳುಹಿಸಿದ್ದರು. ಇಲಾಖೆ ಪ್ರಗತಿ ಬಗ್ಗೆ ಸಮರ್ಪಕ ಉತ್ತರ ನೀಡಲಿಲ್ಲ. ಯಾವ್ಯಾವ ಇಲಾಖೆಯಂದ ಹಿರಿಯ ಅಧಿಕಾರಿಗಳು ಬಂದಿಲ್ಲವೋ ಅವರಿಗೆ ನೋಟಿಸ್ ನೀಡಿ ಎಂದರು.

ತೋಟಗಳಿಗೆ ಭೇಟಿ ನೀಡಿ ಅಡಕೆ, ಕೊಳೆ, ಎಲೆಚುಕ್ಕೆ ರೋಗ ಮೊದಲಾದವುಗಳ ಬಗ್ಗೆ ಪರಿಶೀಲಿಸಿ ವರದಿ ಕೊಡಬೇಕು. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವಸತಿ ನಿಲಯಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುವಂತೆ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು. ಅರಣ್ಯ ಇಲಾಖೆಯಿಂದ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜಿನ ಅವರಣದಲ್ಲಿ ಹಸಿರೀಕರಣ ಮಾಡಬೇಕು ಎಂದು ಕಿರಣ್‌ಕುಮಾರ್ ತಿಳಿಸಿದರು.

ಆನವಟ್ಟಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಉಪನ್ಯಾಸಕರೊಬ್ಬರು ಮನವಿ ಮಾಡಿದರು. ತಾಪಂ ಇಒ ಶಶಿಧರ, ತಾಪಂ ಸಹಾಯಕ ಅಭಿವೃದ್ಧಿ ಅಧಿಕಾರಿ ಶ್ರೀರಾಮ್, ಸಹಾಯಕ ಲೆಕ್ಕಾಧಿಕಾರಿ ಮಂಜುನಾಥ್, ಟಿಎಚ್‌ಒ ನೂತನ್ ನಾಯಕ್, ರೇವಣಪ್ಪ, ನಾಗರಾಜ್ ಅಣ್ವೇಕರ್, ಮುರುಗೇಶ್, ಡಾ. ಪ್ರದೀಪ್‌ಕುಮಾರ ಇತರರಿದ್ದರು.