ಇರುವಕ್ಕಿ ಕೃಷಿ ವಿವಿಯಲ್ಲಿ ಏರ್ಪಡಿಸಿದ್ದ ಕೋಕೋ ಮತ್ತು ಗೇರು ಕೃಷಿ ತರಬೇತಿ ಶಿಬಿರದಲ್ಲಿ ಸಸಿಗಳನ್ನು ವಿತರಿಸಲಾಯಿತು. ಡಾ. ಆರ್.ಸಿ.ಜಗದೀಶ್, ಎಂ.ರವಿಕುಮಾರ, ಡಾ. ಜಿ.ಎನ್.ಮಂಜೇಶ್, ಡಾ. ವೆಂಕಟೇಶ್ ಇತರರಿದ್ದರು.  
ನ್ಯೂಸ್

ಅಂತರ ಬೆಳೆಯಿಂದ ಅಧಿಕ ಲಾಭ

ಆನಂದಪುರ: ಅಡಕೆಯನ್ನು ಏಕಬೆಳೆಯಾಗಿ ಕೃಷಿ ನಡೆಸುವ ಬದಲು ಅಂತರ ಬೆಳೆ ಕೃಷಿ ಬಗ್ಗೆ ರೈತರು ಆಸಕ್ತಿ ವಹಿಸಬೇಕು ಎಂದು ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಸಲಹೆ ನೀಡಿದರು.

ವಿವಿ ಆವರಣದಲ್ಲಿ ಏರ್ಪಡಿಸಿದ್ದ ಗೇರು ಮತ್ತು ಕೋಕೋ ಬೆಳೆಯಲ್ಲಿ ತಾಂತ್ರಿಕತೆ ಕುರಿತ ಮೂರು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಕೋಕೋ ಕೃಷಿ ಮೂಲಕ ಅಧಿಕ ಲಾಭ ಗಳಿಸಬಹುದು. ಕೋಕೋ ಬೀಜಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆ ಇರುವುದನ್ನು ಮಲೆನಾಡಿನ ರೈತರು ಗಮನಿಸಬೇಕು. ನೀರಿನ ಲಭ್ಯತೆ ಕಡಿಮೆ ಇರುವ ಜಮೀನಿನಲ್ಲಿ ಗೇರು ಕೃಷಿ ಮಾಡಿದರೆ ಅಧಿಕ ಇಳುವರಿ ದೊರೆಯುತ್ತದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಎಂ.ರವಿಕುಮಾರ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಪ್ರೋತ್ಸಾಹ ಯೋಜನೆ ಇದೆ ಎಂದರು. ಪುತ್ತೂರಿನ ಗೇರು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ. ಜಿ.ಎನ್.ಮಂಜೇಶ್, ಮಣ್ಣು ವಿಜ್ಞಾನಿ ಡಾ. ವೆಂಕಟೇಶ್ ತರಬೇತಿ ನೀಡಿದರು. ಪ್ರಾಧ್ಯಾಪಕ ಡಾ. ಸದಾಶಿವ ನಡುಕೇರಿ, ಡಾ. ಬಸವರಾಜಪ್ಪ ಎಚ್.ಬೋಗಿ, ಡಾ. ಎಚ್.ಎಂ.ಹೊನ್ನಪ್ಪ ಇತರರಿದ್ದರು.