ಸಾಗರ ಸಮೀಪ ರಾಮನಗರ ಐಟಿಐನಲ್ಲಿ ಏರ್ಪಡಿಸಿದ್ದ ಅಭಿಯಂತರ ದಿನಾಚರಣೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಕಾಗೋಡು ತಿಮ್ಮಪ್ಪ, ಎಲ್.ಚಂದ್ರಪ್ಪ, ಗಣಪತಿ ಇತರರಿದ್ದರು.  
ನ್ಯೂಸ್

ತಾಂತ್ರಿಕ ಪದವಿಗೆ ಹೆಚ್ಚಿನ ಬೇಡಿಕೆ

ಸೋಮಶೇಖರ ಎನ್

ಸಾಗರ: ದೇಶದಲ್ಲಿ ತಾಂತ್ರಿಕ ಪದವಿಗೆ ಉತ್ತಮ ಬೇಡಿಕೆ ಇದ್ದು, ಹಾಗೆಯೇ ಉದ್ಯೋಗ ಅವಕಾಶಗಳೂ ಅಧಿಕ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಮೀಪದ ರಾಮನಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಭಿಯಂತರ ದಿನಾಚರಣೆ ಹಾಗೂ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜಿಗೆ ಅವಶ್ಯವಿರುವ ಶಿಕ್ಷಕರು, ಮೂಲ ಸೌಕರ್ಯ ಕಲ್ಪಿಸಲಾಗಿದೆ. ತಾಂತ್ರಿಕ ಶಿಕ್ಷಣ ಇಲಾಖೆ ಸಚಿವರನ್ನು ಭೇಟಿ ಮಾಡಿ ಕಾಲೇಜಿನ ಮತ್ತಷ್ಟು ಅಭಿವೃದ್ಧಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ 2009ರಲ್ಲಿ ರಾಮನಗರ ಐಟಿಐ ಕಾಲೇಜಿಗೆ 12 ಎಕರೆ ಜಮೀನು ಮಂಜೂರು ಮಾಡಿದ್ದೆ. ಇದೀಗ ರಾಮನಗರ ಐಟಿಐ ಕಾಲೇಜು ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಸಾಗರ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಬಿ.ಟಿ.ಶೇಖರಪ್ಪ ಮಾತನಾಡಿ, ಸಂಸ್ಥೆಗೆ ಇನ್ನಷ್ಟು ಮೂಲ ಸೌಲಭ್ಯ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, 7 ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿಗೆ ಬರುವ ರಸ್ತೆ ಅಭಿವೃದ್ಧಿ ಜತೆಗೆ ಸುತ್ತ ಕಾಂಪೌಂಡ್ ನಿರ್ಮಿಸಬೇಕು. ಎರಡು ಬ್ಯಾಚ್‌ನಲ್ಲಿ ತರಗತಿ ನಡೆಯುತ್ತಿದ್ದು, ಮಕ್ಕಳಿಗೆ ಅನುಕೂಲವಾಗಲು ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ತಾಂತ್ರಿಕ ಶಿಕ್ಷಣ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಎಲ್.ಚಂದ್ರಪ್ಪ, ಗಣಪತಿ, ಹೊಳೆಯಪ್ಪ, ಚಂದ್ರಶೇಖರ್, ಪ್ರಸನ್ನ, ನಾಗರಾಜ್, ಅಣ್ಣಪ್ಪ, ಧನರಾಜ್, ರಮೇಶ್, ಸುಗಂಧಿ, ಶಶಿಧರ ಇತರರಿದ್ದರು.