ಸೊರಬ ತಾಲೂಕು ಉದ್ರಿಯಲ್ಲಿ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಕೆಲಸ ನಡೆಯುವ ಸ್ಥಳದಲ್ಲೇ ಆರೋಗ್ಯ ಕುರಿತು ವೈದ್ಯಾಧಿಕಾರಿ ಡಾ. ಎಂ.ಕೆ.ಮಹೇಶ್ ಮಾಹಿತಿ ನೀಡಿದರು. ಹೋಮೇಶಪ್ಪ, ವೀಣಾ, ಸುರೇಶ್ ಮತ್ತಿತರರಿದ್ದರು.  
ನ್ಯೂಸ್

ಉತ್ತಮ ಜೀವನಕ್ಕೆ ಆರೋಗ್ಯ ಮುಖ್ಯ

ಸೊರಬ: ಉತ್ತಮ ಜೀವನ ನಡೆಸಲು ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಎಂ.ಕೆ.ಮಹೇಶ್ ಹೇಳಿದರು.

ತಾಲೂಕಿನ ಉದ್ರಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಆರೋಗ್ಯ ಉಪಕೇಂದ್ರದ ಸಹಯೋಗದಲ್ಲಿ ಉದ್ರಿ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸ ನಡೆಯುವ ಸ್ಥಳದಲ್ಲಿಯೇ ಆರೋಗ್ಯ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಕೂಲಿ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಡೀ ವೈದ್ಯರ ತಂಡವೇ ಗ್ರಾಪಂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದಿದೆ. ಮಧುಮೇಹ, ರಕ್ತದೊತ್ತಡ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಪರೀಕ್ಷಿಸಿ ನೀಡುವ ಆಯುರ್ವೇದ ಔಷಧಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪಿಡಿಒ ಹೋಮೇಶಪ್ಪ ಮಾತನಾಡಿ, ನಮ್ಮ ಪಂಚಾಯಿತಿಯಿಂದ ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡುವ ಜತೆಗೆ ಆರೋಗ್ಯ ಸೇವೆ ಒದಗಿಸಬೇಕೆಂದು ಕ್ರಮ ಕೈಗೊಂಡಿದ್ದೇವೆ ಎಂದರು.

40 ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಆಯುರ್ವೇದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ವೀಣಾ, ಸಿಎಚ್‌ಒ ಸುರೇಶ್ ಅವರು ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಮಾಡಿದರು. ಲಿಂಗರಾಜ್, ಬೆನಕೇಶ್, ಬಸವರಾಜ್, ಹೊನ್ನಮ್ಮ, ರಾಧಾ ಇತರರಿದ್ದರು.