ಶಿರಾಳಕೊಪ್ಪದಲ್ಲಿ ಆಯೋಜಿಸಿದ್ದ ಸೇವಾ ವಿಕಾಸ ಶಾಲೆ ವಾರ್ಷಿಕೋತ್ಸವವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಎ.ಎಸ್.ಪದ್ಮನಾಭ್ ಭಟ್, ಬಸವರಾಜ್, ಏಕಾಂತಪ್ಪ, ಅರುಣ್ ಮತ್ತಿತರರಿದ್ದರು. 
ನ್ಯೂಸ್

ಸೇವಾ ವಿಕಾಸ ಶಾಲೆಗೆ ಅರ್ಧ ಎಕರೆ ಭೂಮಿ ದಾನ

ಶಿರಾಳಕೊಪ್ಪ: ಸೇವಾ ವಿಕಾಸ ಶಾಲೆಯ ಮಕ್ಕಳಿಗೆ ಅನುಕೂಲ ಒದಗಿಸುವ ಆಶಯದಿಂದ ನಮ್ಮ ಕುಟುಂಬದ ಹೆಸರಿನಲ್ಲಿರುವ ಅರ್ಧ ಎಕರೆ ಜಮೀನನ್ನು ಕೊಡುಗೆಯಾಗಿ ನೀಡುತ್ತೇನೆ ಎಂದುಸಂಸದ ಬಿ.ವೈ.ರಾಘವೇಂದ್ರ ಘೋಷಿಸಿದರು.

ಪಟ್ಟಣದಲ್ಲಿನ ವಿಶ್ವ ಹಿಂದು ಪರಿಷತ್‌ನ ಸೇವಾ ವಿಕಾಸ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿರಾಳಕೊಪ್ಪಕ್ಕೆ ಶರಾವತಿ ನದಿಯಿಂದ 32 ಕೋಟಿ ರೂ. ಖರ್ಚು ಮಾಡಿ ಪ್ರತಿ ಮನೆಗೆ ನೀರು ತರುವ ಯೋಜನೆಯು ಜಾರಿಗೆ ತರುವ ಕೆಲಸ ಆಗುತ್ತಿದೆ. ಶಿಕಾರಿಪುರದ ಹತ್ತಿರ ಕಾಳೆನಹಳ್ಳಿಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ. ರೈಲ್ವೆ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಮಾಡಲಾಗಿದೆ ಎಂದು ತಿಳಿಸಿದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎ.ಎಸ್.ಪದ್ಮನಾಭ್ ಭಟ್ ಮಾತನಾಡಿ, ಧರ್ಮ, ಆಚಾರ-ವಿಚಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ 1985ರಲ್ಲಿ ಈ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದೆ. ಮಕ್ಕಳಿಗೆ ಮಾತೃಭಾಷೆ ಮುಖ್ಯವಾಗಿ ಬೇಕಾಗಿದೆ. ನಾವುಗಳು ಈಗ ಇಂಗ್ಲಿಷ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿ ಎಂದರು.

ವಿಶ್ವ ಹಿಂದು ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಪ್ರಪಂಚದಲ್ಲಿ ಅತಿ ಹೆಚ್ಚು ಬುದ್ಧಿವಂತರು ಇರುವ ದೇಶ ಭಾರತ ಎಂದರು. ಸಂಸ್ಥೆ ಅಧ್ಯಕ್ಷ ಏಕಾಂತಪ್ಪ, ಕಾರ್ಯದರ್ಶಿ ಅರುಣ್, ನಿರ್ದೇಶಕರಾದ ಎಚ್.ಎಂ.ಗಂಗಮ್ಮ, ರಟ್ಟಿಹಳ್ಳಿ ಲೋಕೇಶ, ಲಿಂಗರಾಜ್, ಚನ್ನಪ್ಪ ಉಪಸ್ಥಿತರಿದ್ದರು.