ಹೊಂಬುಜ ಜೈನಮಠದಲ್ಲಿ ಗಣಾಧಿಪತಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು ಹಾಗೂ ಸಸಂಘದ ಮುನಿಶ್ರೀಗಳು ಸೋಂದಾ ಶ್ರೀ ಕ್ಷೇತ್ರದ ದರ್ಶನಾರ್ಥ ವಿಹಾರ ಮುಂದುವರಿಸಿದರು. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಇತರರಿದ್ದರು.  
ನ್ಯೂಸ್

ವಿಘ್ನಗಳನ್ನು ನಿರಾತಂಕವಾಗಿ ಎದುರಿಸಿ

ಸೋಮಶೇಖರ ಎನ್

ರಿಪ್ಪನ್‌ಪೇಟೆ: ಯುಗ ಯುಗಗಳಿಂದಲೂ ಆಚರಿಸಲ್ಪಡುವ ಹೊಸ ಸಂವತ್ಸರದ ಮೊದಲ ದಿನ ಯುಗಾದಿ. ಹೊಸ ವರ್ಷಾಚರಣೆ ಪ್ರಕೃತಿ ಆರಾಧನೆ ಪರಂಪರೆ ತಿಳಿಸುತ್ತದೆ ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಹೊಂಬುಜ ಜೈನಮಠದಲ್ಲಿ ವಿಶ್ವಾವಸು ಸಂವತ್ಸರದ ಸುದಿನ ನೂತನ ಪಂಚಾಗ ಪಠಿಸುವುದರೊಂದಿಗೆ ಆಶೀರ್ವಚನ ನೀಡಿದ ಅವರು, ಆರೋಗ್ಯವಂತರಾಗಿ ಉತ್ತಮ ಸಂಸ್ಕಾರದ ಜೀವನ ನಿರ್ವಹಣೆ ಮಾಡಬೇಕು. ವಿಘ್ನಗಳನ್ನು ನಿರಾತಂಕವಾಗಿ ಎದುರಿಸಬೇಕು ಎಂದು ತಿಳಿಸಿದರು.

ಗಣಾಧಿಪತಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿಗೆ ಪೂಜೆಗಳು ನೆರವೇರಿದವು. ಮುನಿಶ್ರೀಗಳ ಸಸಂಘ, ಆರ್ಯಿಕೆಯರು ಉಪಸ್ಥಿತರಿದ್ದರು. ವಿವಿಧ ದೇಗುಲಗಳಲ್ಲಿ ಆಗಮೋಕ್ತ ವಿಧಿಗಳು ಜರುಗಿದವು.

ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳ ಸದಸ್ಯರು, ಭಕ್ತರು ಶ್ರದ್ಧಾಭಕ್ತಿ ಪೂಜೆ ಸಮರ್ಪಿಸಿ ಪೂಜ್ಯ ಮುನಿಶ್ರೀ, ಆರ್ಯಿಕೆಯರು, ಸ್ವಾಮೀಜಿ ಅವರ ಆಶೀರ್ವಾದ, ಶ್ರೀಲ ಮಂತ್ರಾಕ್ಷತೆ ಪಡೆದರು. ಪದ್ಮರಾಜ ಇಂದ್ರ ಪೂಜಾ ವಿಧಿಗಳನ್ನು ನೆರವೇರಿಸಿದರು. ಗಣಾಧಿಪತಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು ಹಾಗೂ ಸಸಂಘದ ಮುನಿಶ್ರೀಗಳವರು ಸೋಂದಾ ಶ್ರೀ ಕ್ಷೇತ್ರದ ದರ್ಶನಾರ್ಥ ವಿಹಾರ ಮುಂದುವರಿಸಿದರು.