ಉಳ್ಳೂರು ಗ್ರಾಪಂನ ಜಿಗಳೇಮನೆ ಸರ್ಕಾರಿ ಶಾಲೆಯಲ್ಲಿ ಯುವ ಬೆಂಗಳೂರು ಟ್ರಸ್ಟ್‌ನಿಂದ ಶಾಲಾ ಕಿಟ್ ವಿತರಿಸಲಾಯಿತು. ನೇತ್ರಾವತಿ, ಭಾಸ್ಕರ, ಸುಧೀರ್, ಪಲ್ಲವಿ, ಕೃಷ್ಣಮೂರ್ತಿ, ಮಂಗಳಾ ಇತರರಿದ್ದರು.  
ನ್ಯೂಸ್

ಸೇವಾ ಸಂಸ್ಥೆಗಳಿಂದ ಶಾಲೆಗಳ ಅಭಿವೃದ್ಧಿ

ತ್ಯಾಗರ್ತಿ: ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಪಾಲಕರು ಆಸಕ್ತಿ ವಹಿಸಿದರೆ ಸರ್ಕಾರಿ ಶಾಲೆಗಳಿಗೆ ಆಧುನಿಕ ಸ್ಪರ್ಶ ನೀಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದು ಜಿಗಳೆಮನೆ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ನೇತ್ರಾವತಿ ಹೇಳಿದರು.

ಉಳ್ಳೂರು ಗ್ರಾಪಂನ ಜಿಗಳೇಮನೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಯುವ ಬೆಂಗಳೂರು ಟ್ರಸ್ಟ್‌ನಿಂದ ಉಚಿತವಾಗಿ ನೀಡಿದ ಶಾಲಾ ಕಿಟ್ ವಿತರಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಹಿಂದುಳಿದ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಯುವ ಬೆಂಗಳೂರು ಟ್ರಸ್ಟ್ ಮುಂದಿನ ಹತ್ತು ವರ್ಷಗಳ ಕಾಲ ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್, ಪೆನ್ ಸೇರಿದ ಕಿಟ್ ವಿತರಿಸುವ ಯೋಜನೆ ರೂಪಿಸಿದ್ದಾರೆ. ಸಂಸ್ಥೆಯಿಂದ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಯಲ್ಲಿ ಇಂತಹ ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಗೆ ಸಾಗರ ತಾಲೂಕಿನ ಮಂಚಾಲೆ, ಕಾನುಗೋಡು, ಮಂಕಳಲೆ ಮತ್ತು ಜಿಗಳೆಮನೆ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಇರುವಂತೆ ಆಧುನಿಕ ಸೌಲಭ್ಯಗಳನ್ನು ಸರ್ಕಾರಿ ಶಾಲೆಯಲ್ಲಿ ನೀಡಲಾಗುತ್ತದೆ. ಚಳಿಗಾಲದಲ್ಲಿ ಮಕ್ಕಳಿಗೆ ಸ್ವೆಟರ್, ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಬೇಕಾಗುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಮಾತನಾಡಿ, ಬಡವರ ಮಕ್ಕಳ ಶಿಕ್ಷಣಕ್ಕೆ ಯುವ ಬೆಂಗಳೂರು ಟ್ರಸ್ಟ್ ಕೊಡುಗೆ ಶ್ಲಾಘನೀಯ. ಸಂಸ್ಥೆ ಸಂಸ್ಥಾಪಕ ಜಿ.ಕಿರಣ್ ಸಾಗರ್, ಬಿ.ವಿ.ಸುನೀಲ್, ಶ್ವೇತಾ ಎಸ್.ರಾವ್, ಅಶೋಕ್ ಬಿ. ಯಾದವ್ ಮಕ್ಕಳಿಗೆ ಸೌಕರ್ಯ ಒದಗಿಸುತ್ತಿದ್ದಾರೆ. ಮಕ್ಕಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದರೆ ನೀಡಿದ ಕೊಡುಗೆ ಸಾರ್ಥಕವಾಗಲಿದೆ ಎಂದು ಹೇಳಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಪಲ್ಲವಿ, ಸಹಶಿಕ್ಷಕ ಸುಧೀರ್, ಚಂದ್ರಶೇಖರ, ಕೃಷ್ಣಮೂರ್ತಿ, ಮಂಗಳಾ ಇತರರಿದ್ದರು.