ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಕೆ.ರಮೇಶ್ ಅವರನ್ನು ತೀರ್ಥಹಳ್ಳಿ ವರ್ತಕರ ಸೌಹಾರ್ದ ಸಂಘದಿಂದ ಗೌರವಿಸಲಾಯಿತು. ಡಾನ್ ರಾಮಣ್ಣ, ರಾಘವೇಂದ್ರ, ಚೇತನ್ಯ ಜವಳಿ, ರಾಘವೇಂದ್ರ ಮಲ್ಯ ಇತರರಿದ್ದರು.  
ನ್ಯೂಸ್

ಶುದ್ಧ ಮನಸ್ಸಿದ್ದರೆ ಸೃಜನಶೀಲ ಆಲೋಚನೆ

ತೀರ್ಥಹಳ್ಳಿ: ವ್ಯಕ್ತಿಯಿಂದ ವ್ಯಕ್ತಿಗೆ ಅಭಿಪ್ರಾಯಗಳು ವಿಭಿನ್ನವಾಗಿರುತ್ತವೆ. ಒಬ್ಬರ ಸಂಸ್ಕೃತಿ, ಸಂಸ್ಕಾರ, ವಾಡಿಕೆಯನ್ನು ಗುರುತಿಸಿ ಟೀಕಿಸುವ ಬದಲು ಭಾಗವಹಿಸದೆ ಪ್ರತಿಭಟಿಸುವ ತಾಳ್ಮೆ ಇರಬೇಕು. ಸಂಘರ್ಷಕ್ಕಿಳಿದರೆ ಅಶಾಂತಿ ಸೃಷ್ಟಿಯಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷ ಜೆ.ಕೆ.ರಮೇಶ್ ಹೇಳಿದರು.

ಪಟ್ಟಣದ ವರ್ತಕರ ಸೌಹಾರ್ದ ಸಹಕಾರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರೀತಿ, ವಿಶ್ವಾಸ ಮರೆತು ಪರಸ್ಪರ ಕಿತ್ತಾಡಿದರೆ ನೆಮ್ಮದಿ ಹಾಳಾಗುತ್ತದೆ ಎಂದು ತಿಳಿಸಿದರು.

ಹೃದಯ ಪರಿಶುದ್ಧವಾಗಿದ್ದರೆ ಮನಸ್ಸಿನ ಆಲೋಚನೆ ಸೃಜನಶೀಲವಾಗಿರುತ್ತದೆ. ಸಾಹಿತ್ಯ ಓದುಗ ಮತ್ತು ಕರ್ತೃ ನಡುವೆ ಭಿನ್ನತೆ ಇದ್ದರೆ ಸಾಹಿತ್ಯ ವ್ಯಾಖ್ಯಾನ ಅರ್ಥವಾಗದು. ಸಮಾನ ಮನಸ್ಕರಾಗಿದ್ದರೆ ಮಾತ್ರ ಒಳಾರ್ಥ ಬಿಡಿಸಬಹುದು ಎಂದರು.

ಸಂಘದ ಅಧ್ಯಕ್ಷ ಡಾನ್ ರಾಮಣ್ಣ ಮಾತನಾಡಿ, ಜೆ.ಕೆ.ರಮೇಶ್ ಅವರು ಪ್ರಚಾರ ಬಯಸದ ವ್ಯಕ್ತಿ. ತಪ್ಪುಗಳಿಗೆ ಸೌಮ್ಯ ಸ್ವಭಾವದ ಮೂಲಕ ಕಠೋರವಾಗಿ ಟೀಕಿಸುವ ಗುಣ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಸಂಘದ ನಿರ್ದೇಶಕ ಸೊಪ್ಪುಗುಡ್ಡೆ ರಾಘವೇಂದ್ರ, ಚೈತನ್ಯ ಜವಳಿ, ರಾಘವೇಂದ್ರ ಮಲ್ಯ, ಸಹನಾ ಭಟ್, ಯುವರಾಜ್ ಕೈಮರ, ಬಳಗಟ್ಟೆ ಗಿರೀಶ್, ಮಹಮ್ಮದ್ ಶಫಿ, ರಾಘವೇಂದ್ರ ಶೆಣೈ ಇದ್ದರು.