ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೆಕ್ಕಿನಕಲ್ಮಠ  
ನ್ಯೂಸ್

ನಾಡಿನ ಇತಿಹಾಸದ ಅರಿವು ಮೂಡಿಸಿ

ಆನಂದಪುರ: ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುವ ಜತೆಗೆ ಅವರಲ್ಲಿ ದೇಶಭಕ್ತಿ ಮತ್ತು ನಾಡಿನ ಐತಿಹಾಸಿಕ ಪ್ರಜ್ಞೆ ಹೆಚ್ಚಿಸುವ ಕಾರ್ಯ ಅಗತ್ಯವಿದೆ ಎಂದು ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಆನಂದಪುರ ಮುರುಘಾ ಮಠದ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವಾದಿ ಶಿವಶರಣರು ಜೀವನ ಮೌಲ್ಯಗಳ ಮಹತ್ವ ಸಾರಿದ್ದಾರೆ. ಸಮಾಜದಲ್ಲಿನ ಮೂಢನಂಬಿಕೆ ಖಂಡಿಸಿ ಶ್ರೇಷ್ಠ ಬದುಕಿಗೆ ಉತ್ತಮ ಸೂತ್ರ ನೀಡಿದ್ದಾರೆ. ಅಹಂಕಾರ, ಸ್ವಾರ್ಥ, ಸಂಕುಚಿತ ಭಾವದಿಂದ ಹೊರಬರಲು ವಚನ ಸಾಹಿತ್ಯ ಉತ್ತಮ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.

ಅಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಜಯಂತ ಮಾತನಾಡಿ, ಅಂಕಗಳಿಕೆ ಜತೆ ನಾವು ಮೌಲ್ಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಸಂಸ್ಕಾರ ನೀಡುವ, ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸುವುದು ಶಿಕ್ಷಣದ ಮೂಲ ಉದ್ದೇಶವಾಗಬೇಕು. ಸದ್ಗುಣ ಭರಿತ ಶ್ರೇಷ್ಠ ಸಮಾಜ ನಿರ್ಮಾಣ ಶಿಕ್ಷಣದ ಗುರಿ. ಆದರೆ ವಿದ್ಯಾರ್ಥಿಗಳಿಗೆ ಪಠ್ಯದ ಚೌಕಟ್ಟು ಅಳವಡಿಸಿ ಸೀಮಿತ ವಿಷಯ ಕಲಿಸಲಾಗುತ್ತಿದೆ. ಕಲಿಕೆ ಜತೆಗೆ ಸಂಸ್ಕಾರ, ಕಲೆ, ಸಾಹಿತ್ಯ ರಚನೆ, ಮಾನವೀಯ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ ಎಂದರು.

ಶ್ರೀಮಠದ ಭಕ್ತರು, ಗೋಷ್ಠಿ ಸೇವಾಕರ್ತರು ಮತ್ತು ಸಾರ್ವಜನಿಕರು ಹಾಜರಿದ್ದರು. ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.