ಸೊರಬದಲ್ಲಿ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 9ನೇ ವಾರ್ಷಿಕೋತ್ಸವದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಉಮಾಕಾಂತ ಗೌಡ, ಮಂಜಪ್ಪ, ಕೃಷ್ಣಪ್ಪ, ಅರುಣ್ ಗೌಡ, ರಾಧಾ ಉಮೇಶ್ ಇತರರಿದ್ದರು.  
ನ್ಯೂಸ್

ಸಂಘಟನೆಯಲ್ಲಿ ಸಮಾಜದ ಪಾಲ್ಗೊಳ್ಳುವಿಕೆ ಮುಖ್ಯ

ಸೊರಬ: ಸಮುದಾಯದ ಸಂಘಟನೆ ಜನರಲ್ಲಿ ಐಕ್ಯತೆ ಮೂಡಿಸುತ್ತದೆ. ಪ್ರತಿಯೊಬ್ಬರೂ ವೈಯಕ್ತಿಕ ಜೀವನದ ಜತೆಗೆ ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದು ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮಾಕಾಂತ ಗೌಡ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘದ ನೋಂದಣಿ ಸುಲಭ, ಮುನ್ನಡೆಸುವುದು ಕಷ್ಟ. ಹಾಗಾಗಿ ಸಂಘಟನೆಯಲ್ಲಿ ಸಮಾಜದವರ ಪಾಲ್ಗೊಳ್ಳುವಿಕೆ ಮುಖ್ಯ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಸಂಘ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಮಂಜಪ್ಪ ಮಾತನಾಡಿ, ಸಮಾಜದವರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕುಟುಂಬದ ಜತೆಗೆ ಸಮಾಜದ ಜನರ ಏಳಿಗೆಗೆ ಅಳಿಲು ಸೇವೆ ಮಾಡಬೇಕು. ಯುವ ಪೀಳಿಗೆ ಸಂಘ ಮುನ್ನಡೆಸುವ ಬದ್ಧತೆ ಹೊಂದಬೇಕು ಎಂದರು.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ, ಶಿರಸಿ ತಾಲೂಕು ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಅರುಣ್ ಗೌಡ, ಸೊರಬ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್, ಉಪನ್ಯಾಸಕ ಡಾ. ಉಮೇಶ್, ನಾಗೇಶ್, ಕೃಷ್ಣಪ್ಪ, ಅಶೋಕ್‌ಕುಮಾರ, ರಂಗನಾಥ, ಸರಿತಾ ರಂಗಸ್ವಾಮಿ, ಸವಿತಾ ಕೃಷ್ಣಪ್ಪ, ಸುಲೋಚನಾ ಸುಬ್ರಾಯ, ಜ್ಯೋತಿ ಉಮಾಕಾಂತ ಇತರರಿದ್ದರು.