ಸಾಗರದಲ್ಲಿ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ರಕ್ತದಾನಿಗಳಿಗೆ ಡಾ. ಎಚ್.ಎಂ.ಶಿವಕುಮಾರ್ ಪ್ರಮಾಣ ಪತ್ರ ವಿತರಿಸಿದರು. ಡಾ. ಬಿ.ಜಿ.ಸಂಗಮ್, ಎಂ.ಕೆ.ಶಾಂತಕುಮಾರ್, ನೂತನ್ ಇದ್ದರು.  
ನ್ಯೂಸ್

ಒಬ್ಬರಿಂದ ರಕ್ತದಾನ ನಾಲ್ವರಿಗೆ ಉಪಯುಕ್ತ

ಸಾಗರ: ಒಬ್ಬರು ರಕ್ತದಾನದಿಂದ ನಾಲ್ವರ ಜೀವ ಉಳಿಸಲು ಸಾಧ್ಯವಿದ್ದು, ಯುವಸಮೂಹ ರಕ್ತದಾನಕ್ಕೆ ಮುಂದಾಗಬೇಕು ಎಂದು ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಅಧ್ಯಕ್ಷ ಡಾ. ಎಚ್.ಎಂ.ಶಿವಕುಮಾರ್ ಹೇಳಿದರು.

ಸಾಗರದ ಉಪವಿಭಾಗೀಯ ಆಸ್ಪತ್ರೆ ಆವರಣದ ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದಲ್ಲಿ ರಕ್ತನಿಧಿ ಕೇಂದ್ರ ಹಾಗೂ ಎಲ್‌ಬಿ ಕಾಲೇಜಿನಿಂದ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಜನರಲ್ಲಿ ರಕ್ತದಾನದ ಬಗ್ಗೆ ಆತಂಕ ಇದ್ದು, ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಭಾವನೆ ಇದೆ. ಆರೋಗ್ಯವಂತ ಯುವಜನರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ಉಪವಿಭಾಗೀಯ ಆಸ್ಪತ್ರೆ ಸೇರಿ ರೋಗಿಗಳಿಗೆ ತುರ್ತು ಸಂದರ್ಭ ರಕ್ತ ಪೂರೈಸುವ ಮೂಲಕ ಸಾಗರದ ರಕ್ತನಿಧಿ ಕೇಂದ್ರ ಉತ್ತಮ ಕೆಲಸ ಮಾಡುತ್ತಿದೆ. ರಕ್ತದ ಬೇಡಿಕೆ ಹೆಚ್ಚಿದ್ದು, ರಕ್ತದಾನಿಗಳ ಸಂಖ್ಯೆ ಕಡಿಮೆ ಇದೆ. ಹೆಚ್ಚು ಜನರು ರಕ್ತದಾನ ಮಾಡಿದರೆ ಸಂಕಷ್ಟ ಸಂದರ್ಭದಲ್ಲಿ ಸಹಕಾರಿಯಾಗುತ್ತದೆ ಎಂದರು. 16 ಎನ್‌ಸಿಸಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ರೋಟರಿ ರಕ್ತನಿಧಿ ಕೇಂದ್ರದ ಡಾ. ಬಿ.ಜಿ.ಸಂಗಮ್, ಎಂ.ಕೆ.ಶಾಂತಕುಮಾರ್, ಎಲ್‌ಬಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ನೂತನ್ ಇತರರಿದ್ದರು.