Priyanka Chaturvedi: ಇತ್ತೀಚೆಗೆ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ ಮಂಡಿಸಿರುವ ಹೊಸ ಸಾಂವಿಧಾನಿಕ ತಿದ್ದುಪಡಿಯು, ಒಂದು ರಾಷ್ಟ್ರ, ಒಂದು ಪಕ್ಷ ಎಂಬ ಕಾನೂನನ್ನು ಜಾರಿಗೆ ತರುವ ಮಾರ್ಗವಾಗಿದೆ ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಶನಿವಾರ (ಆಗಸ್ಟ್ 23) ಟೀಕಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ, ಬಿಜೆಪಿ ತನ್ನ ಅಜೆಂಡಾವನ್ನು ಚುನಾವಣಾ ಆಯೋಗವನ್ನು ಬಳಸಿಕೊಳ್ಳುವ ಮೂಲಕ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದರು. ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಈ ಮಸೂದೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ಇದನ್ನು ಜೆಪಿಸಿ ( Joint Parliamentary Committee) ಯಲ್ಲಿ ವಿರೋಧಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಸಂಸದೆ ಪ್ರಿಯಾ ಸರೋಜ್ ಜೊತೆಗಿನ ತಮ್ಮ ಪ್ರೇಮಕಥೆ ಹಂಚಿಕೊಂಡ ಕ್ರಿಕೆಟರ್ ರಿಂಕು ಸಿಂಗ್| Rinku Singh-Priya Saroj
2014 ರ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುತ್ತೇವೆ ಎಂದಿತ್ತು, ಇದು ಕೇವಲ ಚುನಾವಣೆ ಹೇಳಿಕೆಗೆ ಸೀಮಿತವಾಗಿದೆ ಎಂದಿರುವ ಪ್ರಿಯಾಂಕ, ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ಎಂದರು. ರಾಜಕಾರಣಿಗಳು ಭ್ರಷ್ಟಾಚಾರದಿಂದ ದೂರವಿದ್ದು, ಪಾರದರ್ಶಕತೆ ಅಳವಡಿಸಿಕೊಳ್ಳಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ, ಪ್ರಸ್ತುತ ಸರ್ಕಾರದ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದರು.
ಸಾಂವಿಧಾನಿಕ ತಿದ್ದುಪಡಿಯಲ್ಲಿ ಏನಿದೆ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದರು , ಅವುಗಳಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025 ಸೇರಿವೆ. ಈ ಮಸೂದೆಯು ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಂತಹ ಚುನಾಯಿತ ಅಧಿಕಾರಿಗಳನ್ನು ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಿ ಸತತ 30 ದಿನಗಳ ಕಾಲ ಬಂಧನದಲ್ಲಿಟ್ಟರೆ ಅವರನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ತೆಗೆದುಹಾಕುವ ಪ್ರಸ್ತಾಪವನ್ನು ಹೊಂದಿದೆ.
ಮಸೂದೆ ಮಂಡನೆಗೆ ವಿಪಕ್ಷಗಳ ವಿರೋಧವೇಕೆ..?
ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು, ಪ್ರತಿಪಕ್ಷಗಳ ಮುಖ್ಯಮಂತ್ರಿಗಳು ಮತ್ತು ಸಚಿವರ ಮೇಲೆ ಪ್ರಕರಣಗಳ ದಾಖಲಿಸಿ ಜೈಲಿಗೆ ಹಾಕಬಹುದು ಎನ್ನುವುದು ವಿಪಕ್ಷಗಳ ಆತಂಕ.(ಏಜೆನ್ಸೀಸ್)