ನ್ಯೂಸ್

ಜೆಡಿಎಸ್​ ಮುಖಂಡನಿಂದ ಉಚಿತ ಹೆಲ್ಮೆಟ್​ ವಿತರಣೆ: ನಾ ಮುಂದು- ತಾ ಮುಂದು ಎಂಬಂತೆ ಮುಗಿಬಿದ್ದ ಜನ

ತುಮಕೂರು: ಉಚಿತ ಹೆಲ್ಮೆಟ್​ಗಾಗಿ ನಾ ಮುಂದು- ತಾ ಮುಂದು ಎಂಬಂತೆ ನೂರಾರು ಜನ ಮುಗಿಬಿದ್ದು ಹೆಲ್ಮೆಟ್​ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಈ ಘಟನೆ ಸಂಭವಿಸಿದೆ. ಶಿರಾ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಉಗ್ರೇಶ್, ನಗರದ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿದರು. ಕೆಲ ದಿನಗಳ ಹಿಂದೆ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉಗ್ರೇಶ್​ ಆಯೋಜಿಸಿದ್ದರು. ಬಳಿಕ ಬೈಕ್​ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಫ್ರೀಯಾಗಿ ಹೆಲ್ಮೆಟ್​ ಸಿಗುತ್ತೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಜಮಾಯಿಸಿದ್ದರು. ನನಗೊಂದು, ನನಗೊಂದು.. ಎಂದು ಮುಗಿಬಿದ್ದು ಹೆಲ್ಮೆಟ್ ಪಡೆಯುತ್ತಿದ್ದರು. ಪರಿಣಾಮ ನಗರದ ಪ್ರವಾಸ ಮಂದಿರದ ಸರ್ಕಲ್​ನಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಆಗದೆ ಆಯೋಜಕರು ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿದರು. ಬಳಿಕ ಹಲವರು ನಿರಾಸೆಯಿಂದ ಹಿಂತಿರುಗಿದರು.